ಬಿಜೆಪಿಗೆ ಶ್ರೀರಾಮನ ಶಾಪತಟ್ಟಲಿದೆ
ಮಂಗಳೂರು: ಮುಂಬರುವ ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು, ದೇವಸ್ಥಾನ ಕಾಮಗಾರಿ ಸಂಪೂರ್ಣಗೊಳ್ಳುವ ಮೊದಲೇ ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡುವುದು ಹಿಂದೂ ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದು ಹಿಂದೂ ಮಹಾಸಭಾ ಆರೋಪಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂದೂ ಮಹಾಸಭಾ ಕರ್ನಾಟಕದ ಸಂಸ್ಥಾಪಕ ರಾಜೇಶ್ ಪವಿತ್ರನ್, ಶಾಸ್ತ್ರಗಳನ್ನು ಬದಿಗಿಟ್ಟು, ವೈಯಕ್ತಿಕ ಹಿತಾಸಕ್ತಿ ಮುಂದಿಟ್ಟು ಕೇವಲ ಬೂಟಾಟಿಕೆಯ ಶಾಸ್ತ್ರ ಮಾಡಿದರೆ ಬಿಜೆಪಿಗೆ ಶ್ರೀರಾಮನ ಶಾಪ ತಟ್ಟಲಿದೆ. ಅವರಿಗೆ ಇಂದಿನ ಕರ್ನಾಟಕದ ಪರಿಸ್ಥಿತಿ ನಾಳೆ ಕೇಂದ್ರದಲ್ಲೂ ಬರಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೂರ್ಣಪ್ರಮಾಣದ ದೇವಸ್ಥಾನ ನಿರ್ಮಾಣದ ಮೊದಲೇ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಮಮಂದಿರದ ಉದ್ಘಾಟನೆ ಮಾಡುವುದು ಧರ್ಮಶಾಸ್ತ್ರಕ್ಕೆ ವಿರುದ್ಧ. ಶಾಸ್ತ್ರಕ್ಕೆ ಅಪಚಾರ ಆಗಿರುವುದರಿಂದ ಇದನ್ನು ಹಿಂದೂ ಮಹಾಸಭಾ ಬಲವಾಗಿ ಖಂಡಿಸುತ್ತದೆ ಎಂದು ಅವರು ಹೇಳಿದರು.
ರಾಮಮಂದಿರ ನಿರ್ಮಾಣಕ್ಕೆ ಮುಂಚೂಣಿ ಹೋರಾಟದಲ್ಲಿದ್ದ ಹಿಂದೂ ಮಹಾಸಭಾ, ನಿರ್ಮೋಹಿ ಅಖಾಡ, ಸಾಧುಸಂತರ ವ್ಯವಸ್ಥೆಯನ್ನು ದೂರವಿಟ್ಟು ಕೇಂದ್ರ ಸರಕಾರ ರಾಮಮಂದಿರವನ್ನು ಉದ್ಘಾಟಿಸಲು ಹೊರಟಿದೆ. ಅಯೋಧ್ಯೆ ವಿವಾದದ ಮೂಲ ವಕಾಲತ್ತುದಾರ ಹಿಂದೂ ಮಹಾಸಭಾಕ್ಕೆ ರಾಮಮಂದಿರ ಉದ್ಘಾಟನೆಗೆ ಆಹ್ವಾನವೇ ಇಲ್ಲ. ಹಿಂದುತ್ವದ ವಿಚಾರದಲ್ಲಿ ರಾಜಕೀಯ ಮಾಡಿ ಅಧಿಕಾರಕ್ಕೆ ಏರಿರುವ ಬಿಜೆಪಿ ಈಗ ಪ್ರಭು ಶ್ರೀರಾಮನ ವಿಚಾರದಲ್ಲಿ ರಾಜಕೀಯ ಮಾಡಿದ್ರೆ ಅದನ್ನು ಹಿಂದೂ ಮಹಾಸಭಾ ಒಪ್ಪುವುದಿಲ್ಲ ಎಂದು ರಾಜೇಶ್ ಪವಿತ್ರನ್ ಹೇಳಿದರು.