ಸೆ. 9ರಂದು ಅತೀ ಹಿಂದುಳಿದ ವರ್ಗಗಳ ನಾಯಕರ ಸಭೆ

ಬೆಂಗಳೂರು: ವಿಧಾನ ಪರಿಷತ್ತಿನ ವಿಪಕ್ಷ ನಾಯಕರಾಗಿದ್ದ ಬಿ.ಕೆ. ಹರಿಪ್ರಸಾದ್‌ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳದ್ದರ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಡಾ| ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಸೆ. 9ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅತೀ ಹಿಂದುಳಿದ ವರ್ಗಗಳ ನಾಯಕರ ಸಭೆ ನಡೆಯಲಿದೆ.

ಈ ಸಭೆಗೆ ಬಿಲ್ಲವರು, ಈಡಿಗರು, ನಾಮಧಾರಿಗಳು, ಯಾದವ, ಉಪ್ಪಾರ ಮತ್ತಿತರ ಅತೀ ಹಿಂದುಳಿದ ವರ್ಗಗಳ ಎಲ್ಲ ಜಾತಿಗಳ ಸ್ವಾಮೀಜಿಗಳು ಹಾಗೂ ನಾಯಕರನ್ನು ಆಹ್ವಾನಿಸಲಾಗಿದೆ. ಜತೆಗೆ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್‌ ಅವರನ್ನು ಆಹ್ವಾನಿಸಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ಕೆಲವೊಂದು ಕಾರಣಗಳಿಂದಾಗಿ ಭಿನ್ನಾಭಿಪ್ರಾಯ ಹೊಂದಿರುವ ಹರಿಪ್ರಸಾದ್‌ ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. “ಮುಖ್ಯಮಂತ್ರಿ ಮಾಡುವುದೂ ಗೊತ್ತು, ಇಳಿಸುವುದೂ ಗೊತ್ತು’ ಎಂದು ಬಿಲ್ಲವ ಸಮುದಾಯದ ಸಭೆಯೊಂದರಲ್ಲಿ ಹರಿಪ್ರಸಾದ್‌ ನೀಡಿದ್ದ ಹೇಳಿಕೆ ಕಾಂಗ್ರೆಸ್‌ ಪಕ್ಷದೊಳಗೆ ಸಾಕಷ್ಟು ಚರ್ಚೆಗೆ ಒಳಗಾಗಿತ್ತು.

ಇವೆಲ್ಲದರ ನಡುವೆಯೇ ಕಾಂಗ್ರೆಸ್‌ನೊಳಗಿನ ರಾಜಕೀಯ ಬೆಳವಣಿಗೆಗಳಿಂದ ಬೇಸತ್ತಿದ್ದ ಹರಿಪ್ರಸಾದ್‌ ಅವರು ವಿಧಾನ ಪರಿಷತ್ತಿನ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಆಪ್ತರ ಬಳಿ ಹೇಳಿಕೊಂಡಿದ್ದರು. ಅನಂತರ ಹೈಕಮಾಂಡ್‌ ಸೂಚನೆ ಮೇರೆಗೆ ಡಿಸಿಎಂ ಡಿ.ಕೆ. ಶಿವಕುಮಾರ್‌, ಸಚಿವರಾದ ಡಾ| ಪರಮೇಶ್ವರ್‌, ಕೆ.ಎಚ್‌. ಮುನಿಯಪ್ಪ ಅವರು ಹರಿಪ್ರಸಾದ್‌ ಅವರನ್ನು ಭೇಟಿಯಾಗಿ ದುಡುಕಿನ ನಿರ್ಧಾರ ಕೈಗೊ ಳ್ಳ ದಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ರವಿವಾರವಷ್ಟೇ ಅವರನ್ನು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿಯೂ ನೇಮಿಸಲಾಗಿದೆ.

ಡಾ| ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಭೆಗೆ ರಾಜಕೀಯವಾಗಿ ಹೆಚ್ಚಿನ ಮಹತ್ವ ಬಂದಿದೆ. ಬಿಜೆಪಿ ಅಂದರೆ ಲಿಂಗಾಯತರು, ಜೆಡಿಎಸ್‌ ಅಂದರೆ ಒಕ್ಕಲಿಗರು, ಕಾಂಗ್ರೆಸ್‌ ಅಂದರೆ ಸದ್ಯಕ್ಕೆ ಕುರುಬರು-ಒಕ್ಕಲಿಗರು ಅನ್ನುವಂತಾಗಿದ್ದು, ಇತರ ಹಿಂದುಳಿದ ಜಾತಿಗಳನ್ನು ಯಾರೂ ಪರಿಗಣಿಸುತ್ತಿಲ್ಲ. ಹೀಗಾಗಿ ಅಂತಹ ಜಾತಿಗಳನ್ನು ಒಗ್ಗೂಡಿಸಿ ಶಕ್ತಿ ಪ್ರದರ್ಶನ ಮಾಡುವ ಉದ್ದೇಶದಿಂದ ಸೆ. 9ರಂದು ಪೂರ್ವಭಾವಿ ಸಭೆ ಕರೆಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದು ಒಂದು ರೀತಿಯಲ್ಲಿ ಸರಕಾರದ ವಿರುದ್ಧ ಶಕ್ತಿ ಪ್ರದರ್ಶನವೆಂದೇ ಹೇಳಲಾಗುತ್ತಿದೆ.

Latest Indian news

Popular Stories