ಮಂಗಳೂರು: ತಲವಾರು ದಾಳಿಗೆ ಯತ್ನ – ಮೂವರು ದುಷ್ಕರ್ಮಿಗಳ ಬಂಧನ

ಮಂಗಳೂರು, ಆ.22: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಎಂ.ವಿ.ಶೆಟ್ಟಿ ಕಾಲೇಜು ರಸ್ತೆಯ ಬಳಿ ಆ.20ರಂದು ತನ್ನ ಮನೆಯತ್ತ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವನ ಮೇಲೆ ಮೂವರು ವ್ಯಕ್ತಿಗಳು ಕತ್ತಿಗಳಿಂದ ದಾಳಿ ನಡೆಸಿದ್ದಾರೆ. ಕಾವೂರು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ 24 ಗಂಟೆಯೊಳಗೆ ಮೂವರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮಂಗಳೂರಿನ ಉರುಂಡಾಡಿಗುಡ್ಡೆ ನಿವಾಸಿ ಚರಣ್ ರಾಜ್ ಅಲಿಯಾಸ್ ಚರಣ್ (23), ಸುರತ್ಕಲ್ ಹೊಸಬೆಟ್ಟು ನಿವಾಸಿ ಸುಮಂತ್ ಬರ್ಮನ್ (24) ಮತ್ತು ಕೋಡಿಕಲ್ ಸುಂಕದಕಟ್ಟೆ ಕಲ್ಬಾವಾಯಿ ರಸ್ತೆ ನಿವಾಸಿ ಅವಿನಾಶ್ (24) ಎಂದು ಗುರುತಿಸಲಾಗಿದೆ.

ಚರಣ್ ವಿರುದ್ಧ ಉರ್ವ ಪೊಲೀಸ್ ಠಾಣೆಯಲ್ಲಿ ಒಂದು, ಪಣಂಬೂರು ಠಾಣೆಯಲ್ಲಿ ಒಂದು ಮತ್ತು ಕಾವೂರು ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ.

ಸುಮಂತ್ ವಿರುದ್ಧ ಪಣಂಬೂರು ಮತ್ತು ಬರ್ಕೆ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ಹಾಗೂ ಕಾವೂರು ಪೊಲೀಸ್ ಠಾಣೆಗಳಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.

ಅವಿನಾಶ್ ವಿರುದ್ಧ ಉರ್ವ ಪೊಲೀಸ್ ಠಾಣೆಯಲ್ಲಿ ನಾಲ್ಕು ಹಾಗೂ ಕಂಕನಾಡಿ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಆತನನ್ನು ಉರ್ವಾ ಪೊಲೀಸ್ ಠಾಣೆಯ ವ್ಯಾಪ್ತಿಯಿಂದಲೂ ಹೊರಹಾಕಲಾಗಿದೆ.

ಎಸಿಪಿ ಮನೋಜ್ ಕುಮಾರ್, ಡಿಸಿಪಿಗಳಾದ ಅಂಶುಕುಮಾರ್ ಮತ್ತು ದಿನೇಶ್ ಕುಮಾರ್ ನೇತೃತ್ವದಲ್ಲಿ ಆರೋಪಿಗಳ ಬಂಧನ ಕಾರ್ಯಾಚರಣೆ ನಡೆದಿದೆ.

Latest Indian news

Popular Stories