ಮಂಗಳೂರಿನಲ್ಲಿ ಮುಂದುವರಿದ ಅನೈತಿಕ ಪೋಲೀಸ್‌ಗಿರಿ: ಮೂವರು ವಶಕ್ಕೆ

ಮಂಗಳೂರು: ಕದ್ರಿ ಪಾರ್ಕ್ ಗೆ ಬಂದಿದ್ದ ಭಿನ್ನ ಸಮುದಾಯದ ಕಾಲೇಜು ವಿದ್ಯಾರ್ಥಿಗಳ ಮೇಲೆ ತಂಡವೊಂದು ಹಲ್ಲೆ ನಡೆಸಿ ಅನೈತಿಕ ಪೋಲೀಸ್‌ಗಿರಿ ನಡೆಸಿದ್ದು, ಪೋಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಶುಕ್ರವಾರ ಬೆಳಗ್ಗೆ ಮಂಗಳೂರಿನ‌ ಕಾಲೇಜೊಂದರ ಯುವಕ ಮತ್ತು ದೇರಳಕಟ್ಟೆಯ ಕಾಲೇಜೊಂದರಲ್ಲಿ ನರ್ಸಿಂಗ್ ಮಾಡುತ್ತಿದ್ದ ವಿದ್ಯಾರ್ಥಿನಿಯು ದೇರಳಕಟ್ಟೆಯಿಂದ ಜೊತೆಯಾಗಿ ಬಸ್‌ನಲ್ಲಿ ಮಂಗಳೂರಿಗೆ ಬಂದಿದ್ದರು. ಅದೇ ಬಸ್‌ನಲ್ಲಿ ಅವರನ್ನು ಹಿಂಬಾಲಿಸುತ್ತಾ ಬಂದ ತಂಡ ಇವರು ಕದ್ರಿ ಪಾರ್ಕ್ ಗೆ ಬರುತ್ತಿದ್ದಾಗ ಪಾರ್ಕ್ ರಸ್ತೆಯಲ್ಲೇ ತಡೆದು ನೈತಿಕ ಪೋಲೀಸ್ ಗಿರಿ ನಡೆಸಿದೆ.

ಈ ವೇಳೆ ಸಂತ್ರಸ್ಥ ವಿದ್ಯಾರ್ಥಿಳು ರಿಕ್ಷಾದಲ್ಲಿ ಹೋಗಲು ಯತ್ನಿಸಿದಾಗ ಮತ್ತೆ ತಂಡ ಅವರನ್ನು ಎಳೆದಾಡಿದೆ. ಆಗ ಸ್ಥಳದಲ್ಲಿ ಜನರು ಜಮಾಯಿಸಿದ್ದು, ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಕದ್ರಿ ಠಾಣಾ ಪಿಎಸ್ಐ ಉಮೇಶ್ ಕುಮಾರ್ ಹಾಗೂ ತಂಡ ಘಟನೆ ನಡೆದ ಐದೇ ನಿಮಿಷಕ್ಕೆ ಸ್ಥಳಕ್ಕೆ ಬಂದಿದ್ದು, ಸಂತ್ರಸ್ಥ ವಿದ್ಯಾರ್ಥಿಗಳಿಬ್ಬರನ್ನು ರಕ್ಷಿಸಿದ್ದಾರೆ.

ಹಲ್ಲೆ ನಡೆಸಿದ ತಂಡದಲ್ಲಿದ್ದವರ ಪೈಕಿ ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕ ಸಹಿತ ಮೂವರನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನುಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories