ಕಾರವಾರ : ಕೇಂದ್ರ ಸರ್ಕಾರದ ಯೋಜನೆಗಳ ಪ್ರಯೋಜನವನ್ನು ತಲುಪಿಸುವ ಉದ್ದೇಶದಿಂದ ವಿಕಸಿತ ಭಾರತ ಸಂಕಲ್ಪಯಾತ್ರೆ ನಡೆಯುತ್ತಿದ್ದು, ಕೇಂದ್ರ ಸರ್ಕಾರದ ಯೋಜನೆಗಳ ಸೌಲಭ್ಯದಿಂದ ಯಾರು ವಂಚಿತರಾಗಬಾರದು ಎಂದು ವಿಧಾನ ಪರಿಷತ್ ಸದಸ್ಯ ಗಣಪತಿ ಡಿ. ಉಳ್ವೇಕರ ಹೇಳಿದರು.
ಅವರು ನಗರಸಭೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ನಗರ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸುವ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಈಗಾಗಲೇ 215 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ಆಯೋಜಿಸಿ ಜನರಿಗೆ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಅದರ ಪ್ರಯೋಜನಗಳ ಬಗ್ಗೆ ತಿಳಿಸಲಾಗಿದೆ ಹಾಗೂ ಯೋಜನೆಗಳ ಸೌಲಭ್ಯ ಪಡೆಯದೆ ಇರರುವವರನ್ನು ಗುರುತಿಸಿ ಅವರಿಗೆಯೋಜನೆಯ ಸೌಲಭ್ಯ ಪಡೆಯಲು ನೋಂದಣಿ ಮಾಡಿಸಲಾಗಿದೆ ಎಂದರು.
ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಜಿಲ್ಲಾ ಸಂಚಾಲಕ ರಾಜೇಂದ್ರ ನಾಯಕ ಮಾತನಾಡಿ, ಜಿಲ್ಲೆಯ 229 ಗ್ರಾಮ ಪಂಚಾಯತಿಗಳ ಪೈಕಿ 215 ಗ್ರಾಮ ಪಂಚಾಯತಿಗಳಲ್ಲಿ ಹಾಗೂ ನಗರ ವ್ಯಾಪ್ತಿಯಲ್ಲಿ 18 ಕ್ರಾರ್ಯಕ್ರಮಗಳ ಪೈಕಿ ಈಗಾಗಲೇ 11 ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಲಾಗಿದೆಎಂದರು.
ನಗರಸಭೆ ಪೌರಾಯುಕ್ತ ಚಂದ್ರಮೌಳಿ ಮಾತನಾಡಿ, ನಗರಸಭೆ ವತಿಯಿಂದ ನಗರ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಪಿಎಂ ಸ್ವನಿಧಿ, ಪಿಎಂ ವಿಶ್ವಕರ್ಮ ಯೋಜನೆ, ಉಜ್ವಲ, ಸ್ಟಾರ್ಟ್ ಅಪ್ ಇಂಡಿಯಾ, ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಸೇವೆಯನ್ನು ಅರ್ಹರಿಗೆ ತಲುಪಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮನೋಜ ಬಾಂದೇಕರ, ಜಿ.ಪಂ. ಡಿಆರ್‌ಡಿಎ ಕರಿಂ ಅಸಾದಿ, ಕೆನರಾ ಬ್ಯಾಂಕ್ ಪ್ರದೇಶಿಕ ವ್ಯವಸ್ಥಾಪಕ ನಂದಕಿಶೋರ, ಸ್ಟೆಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ವ್ಯವಸ್ಥಾಪಕ ಪಿ.ಯು. ಪಾರಿ, ನಬಾರ್ಡ್ ಡಿಡಿಎಂ ರೇಜಿಸ್ ಇಮ್ಮಾನುವೆಲ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಶಾಂತ ನಾಯ್ಕ, ಲೀಡ್ ಬ್ಯಾಂಕ್ ಅಧಿಕಾರಿ ವಾಸುದೇವ, ಅಂಚೆ ಇಲಾಖೆಯ ರಾಘವೇಂದ್ರ ಆಚಾರ್ಯ ಮತ್ತಿತ್ತರರು ಉಪಸ್ಥಿತರಿದ್ದರು.