ಕ್ಷೇತ್ರದ ಅಮಾಯಕರು ಜೈಲಿನಲ್ಲಿ; ಸ್ಪೀಕರ್ ಖಾದರ್‌ ದುಬೈಯಲ್ಲಿ: SDPI ಪ್ರತಿಭಟನಕಾರರ ಆಕ್ರೋಶ

ಮಂಗಳೂರು: ಬೋಳಿಯಾರ್‌ನಲ್ಲಿ ಬಿಜೆಪಿ ವಿಜಯೋತ್ಸವದ ಸಂದರ್ಭದಲ್ಲಿ ಉಂಟಾದ ಗಲಭೆಯ ಹಿನ್ನೆಲೆಯಲ್ಲಿ ಅಮಾಯಕ ಮುಸ್ಲಿಂ ಯುವಕರನ್ನು ಪೊಲೀಸರು ಬಂಧಿಸುತ್ತಿದ್ದಾರೆ ಎಂದು ಆರೋಪಿಸಿ ಕೊಣಾಜೆ ಪೊಲೀಸ್ ಠಾಣೆಯ ಮುಂಭಾಗ ಎಸ್‌ಡಿಪಿಐ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
ಭಾರೀ ಮಳೆಯನ್ನೂ ಲೆಕ್ಕಿಸದೇ ಮಕ್ಕಳು ಮಹಿಳೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.


ಈ ಸಂದರ್ಭದಲ್ಲಿ ಮಾತನಾಡಿದ ಎಸ್ ಡಿ ಪಿ ಐ ಮುಖಂಡ ರಿಯಾಜ್ ಕಡಂಬು, ಬೋಳಿಯಾರ್ ಘಟನೆಗೆ ಬಿಜೆಪಿ ಹಾಗು ಸಂಘ ಪರಿವಾರ ಕಾರಣ ಎಂದು ಮಂಗಳೂರು ಕಮಿಷನರ್ ಸ್ಪಷ್ಟವಾಗಿ ಹೇಳಿದ್ದಾರೆ‌. ಆದರೆ ದಾಳಿಯಾಗುತ್ತಿರುವುದು ಮುಸ್ಲಿಮರ ಮನೆಗಳಿಗೆ ಮಾತ್ರ. ಸ್ಪೀಕರ್ ಕಾದರ್ ಕ್ಷೇತ್ರದ ಅಮಾಯಕರು ಜೈಲಿನಲ್ಲಿ ಇದ್ದರೆ, ಕಾದರ್ ಮಾತ್ರ ದುಬಾಯಿಯಲ್ಲಿ ಆರಾಮವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಇದೆ ರೀತಿ ಮುಸಲ್ಮಾನರ ಬಂಧನ ಮುಂದುವರಿದರೆ ಇಡೀ ಮಂಗಳೂರನ್ನು ಸ್ತಬ್ದಗೊಳಿಸುತ್ತೇವೆ.ಅಲ್ಲದೇ ಖುದ್ದು ಕಮಿಷನರ್ ಅವರೇ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕೆಂದು ಪ್ರತಿಭಟನಕಾರರು ಒತ್ತಾಯಿಸಿದರು.


ಮಂಗಳೂರು ಕಮಿಷನರ್ ಬದಲು ಎಸಿಪಿ ಧನ್ಯಾ ನಾಯಕ್ ಆಗಮಿಸಿ , ಎಸ್ ಡಿಪಿಐ ಮುಖಂಡರು ಸಲ್ಲಿಸಿದ ಮನವಿಯನ್ನು ಸ್ವೀಕರಿಸಿದ ಬೆನ್ನಲ್ಲೇ ಎಸ್ ಡಿಪಿಐ ಮುಖಂಡರು ಪ್ರತಿಭಟನೆ ಕೈಬಿಟ್ಟರು.
ಎಸ್ ಡಿಪಿಐ ಮುಖಂಡರುಗಳಾದ ಅಥಾವುಲ್ಲ ಜೋಕಟ್ಟೆ, ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಮುಂತಾದವರು ಉಪಸ್ಥಿತರಿದ್ದರು.

Latest Indian news

Popular Stories