ಮಂಗಳೂರು: ಕರ್ತವ್ಯ ಲೋಪ, ಹಿರಿಯ ಅಧಿಕಾರಿಗಳೊಂದಿಗೆ ಉಡಾಫೆ ವರ್ತನೆ, ಮರಳುಗಾರಿಕೆ ಜೊತೆ ಶಾಮೀಲು ಆರೋಪದ ಹಿನ್ನೆಲೆಯಲ್ಲಿ ಕಂಕನಾಡಿ ನಗರ ಠಾಣೆ ಇನ್‌ಸ್ಪೆಕ್ಟರ್ ಎಸ್.ಎಚ್. ಭಜಂತ್ರಿ ಅವರನ್ನು ನಗರ ಪೊಲೀಸ್ ಕಮಿಷನರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಮಂಗಳೂರಿನ ಜೆಪ್ಪಿನಮೊಗರು ಬಳಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ದಾಳಿ ನಡೆಸಲು ಎಸಿಪಿ ಧನ್ಯಾ ನಾಯಕ್ ಇನ್‌ಸ್ಪೆಕ್ಟರ್ ಭಜಂತ್ರಿಗೆ ಸೂಚಿಸಿದ್ದರು. ಆದರೆ ಈ ಬಗ್ಗೆ ಯಾವುದೇ ಕ್ರಮ ಜರಗಿಸದೇ ಮೇಲಾಧಿಕಾರಿಗಳ ಸೂಚನೆಯನ್ನು ಭಜಂತ್ರಿ ನಿರ್ಲಕ್ಷಿಸಿದ್ದರು ಎಸಿಪಿ ಕಮಿಷನರ್‌ಗೆ ದೂರು ಸಲ್ಲಿಸಿದ್ದಾರೆ.
ತಮ್ಮ ಅಪಾರ್ಟ್‌ಮೆಂಟ್‌ನ ಇತರರ ಜೊತೆಯೂ ಭಜಂತ್ರಿ ಅನುಚಿತವಾಗಿ ವರ್ತಿಸಿರುವ ಆರೋಪ ಭಜಂತ್ರಿ ಮೇಲಿದೆ.
ಮರಳು ಮಾಫಿಯಾದೊಂದಿಗೆ ಶಾಮೀಲು, ಹಿರಿಯ ಅಧಿಕಾರಿಗಳ ಅದೇಶ ನಿರ್ಲಕ್ಷ್ಯ, ದೂರುದಾರರ ನಿರ್ಲಕ್ಷ್ಯ, ಅಪಾರ್ಟ್‌ಮೆಂಟ್‌ನ ಸಹವರ್ತಿಗಳು ಜೊತೆ ಅಗೌರವದ ವರ್ತನೆಯ ಬಗ್ಗೆ ಖುದ್ದು ಎಸಿಪಿಯೇ ಕಮಿಷರ್‌ಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕಮಿಷನರ್ ಅನುಪಮ್ ಅಗ್ರವಾಲ್ ಭಜಂತ್ರಿ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಈ ಕುರಿತಂತೆ ಪೊಲೀಸ್ ಕಮಿಷನರ್ ವಿವರಣೆ ಕೇಳಿದಾಗ ಅವರ ಜೊತೆಯೂ ಉಡಾಫೆಯಿಂದ ವರ್ತಿಸಿದ್ದಾರೆಂದು ತಿಳಿದು ಬಂದಿದೆ.