ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ವಾಣಿಜ್ಯ ಅಂಗಡಿಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸಿರುವ ಬಿಬಿಎಂಪಿ, ನಿಯಮ ಪಾಲಿಸದ 20 ಸಾವಿರಕ್ಕೂ ಹೆಚ್ಚು ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಸಿರಾಜ್ ಅಹಮದ್ ಮದನಿ ಅವರು ಮಾತನಾಡಿ, ಮುಖ್ಯ ಆಯುಕ್ತರ ನಿರ್ದೇಶನದ ಮೇರೆಗೆ ಎಂಟು ಬಿಬಿಎಂಪಿ ವಲಯಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಅಧಿಕಾರಿಗಳು ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಿ, ನಿಯಮ ಪಾಲಿಸುವಂತೆ ಸೂಚಿಸಿದ್ದಾರೆ. ಫೆ.28ರ ನಂತರವೂ ನಿಯಮ ಪಾಲನೆ ಮಾಡದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು,
“ಎಲ್ಲಾ ಎಂಟು ವಲಯಗಳಲ್ಲಿರುವ ಸುಮಾರು 21,000 ಅಂಗಡಿ ಮಾಲೀಕರಿಗೆ ನೋಟಿಸ್‌ಗಳನ್ನು ನೀಡಲಾಗಿದೆ. ನೋಟಿಸ್ ಬಳಿಕವೂ ಆದೇಶವನ್ನು ಅನುಸರಿಸದ ಅಂಗಡಿಗಳನ್ನು ಬಂದ್ ಮಾಡಿಸುವುದು ಅಥವಾ ಲೈಸೆನ್ಸ್ ರದ್ದುಪಡಿಸುವ ಕುರಿತು ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.