ಸುರತ್ಕಲ್: ಗೇಲ್ ವಿರುದ್ಧ ರಸ್ತೆ ತಡೆದು ಪ್ರತಿಭಟನೆ

ಮಂಗಳೂರು: ಕಂಪೆನಿಗಾಗಿ ಭೂಮಿ ಕಳೆದುಕೊಂಡವರಿಗೆ ಉದ್ಯೋಗ ನೀಡಿಲ್ಲ ಎಂದು ಆರೋಪಿಸಿ ಗೈಲ್ ಕಂಪನಿಯ ವಿರುದ್ಧ ಸಂತ್ರಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ ಕಂಪೆನಿಗಳ ಕಾರ್ಮಿಕರು ಹಾಗೂ ವಾಹನಗಳನ್ನು ಎಂಎಸ್‌ಇಝಡ್ ಗೇಟ್ ಬಳಿ ತಡೆದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರ್ಥಿಕ ತೊಂದರೆಯಿಂದ ಮುಚ್ಚಲ್ಪಟ್ಟಿದ್ದ ಜೆಬಿಎಫ್ ಕಂಪೆನಿಯನ್ನು ಖರೀದಿಸಿದ್ದ ಗೇಲ್ ಇಂಡಿಯಾದವರು ಜೆಬಿಎಫ್‌ನಲ್ಲಿ ಖಾಯಂ ಉದ್ಯೋಗಿಗಳಾಗಿದ್ದವರನ್ನು ಮತ್ತೆ ಮುಂದುವರಿಸಿಲ್ಲ ಎಂದು ಪ್ರತಿಭಟನಕಾರರು ದೂರಿದ್ದಾರೆ.

ಎಂಎಸ್‌ಇಝಡ್ ಸಾಮ್ಯದಲ್ಲಿರುವ ಜೆಬಿಎಫ್ ಎನ್ನುವ ಕಂಪೆನಿಯಲ್ಲಿ ಕಳೆದ 8 ವರ್ಷದಿಂದ ಖಾಯಂ ಉದ್ಯೋಗಿ ಗಳಾಗಿದ್ದೆವು. 2020ರಲ್ಲಿ ನಂತರ 2023ರಲ್ಲಿ ಈ ಕಂಪೆನಿಯನ್ನು ಖರೀದಿಸಿದ್ದಾರೆ. ಜೆಬಿಎಫ್‌ನಲ್ಲಿ ಖಾಯಂ ಉದ್ಯೋಗಿಗಳಾಗಿದ್ದ ನಮ್ಮನ್ನು ಗೇಲ್ ಇಂಡಿಯಾ ಕಂಪೆನಿ ಖಾಯಂ ಉದ್ಯೋಗ ನೀಡಲು ಒಂದು ವರ್ಷದಿಂದ ಹಿಂದೇಟು ಹಾಕುತ್ತಿದೆ. ಹಲವು ಬಾರಿ ಕಂಪೆನಿಯವರನ್ನು ಸಂಪರ್ಕಿಸಿದ್ದು ಸರಿಯಾದ ಸ್ಪಂದನ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಬಂದ ಗೇಲ್ ಇಂಡಿಯಾ ಅಧಿಕಾರಿಗಳು, ಸದ್ಯ ಉದ್ಯೋಗ ಖಾಯಂಗೊಳಿಸುವ ಕುರಿತ ಪ್ರಸ್ತಾವನೆ ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ಉತ್ತರ ಬರುವ ವರೆಗೆ ಕಾಯಬೇಕಿದೆ. ಅಲ್ಲಿಯ ವರೆಗೆ ಸಂತ್ರಸ್ತರನ್ನು ಕಾಂಟ್ರಾಕ್ಟ್ ಆಧಾರದಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳಲಾಗುವುದು. ಕೇಂದ್ರ ಸರಕಾರದ ಆದೇಶದ ಬಳಿಕ ಅದನ್ನು ಅನುಸರಿಸಿ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಕೈಗಾರಿಕಾ ವಲಯ ವಿಭಾಗದ ಜಿಲ್ಲಾಧಿಕಾರಿ ನೇತೃತ್ವದಲ್ಲಿ 16 ಸುತ್ತಿನ ಸಭೆಗಳನ್ನು ನಡೆಸಲಾಗಿದೆ. ಸಭೆಯಲ್ಲಿ ತೆಗೆದುಕೊಂಡಿರುವ ಒಂದು ನಿರ್ಣಯವನ್ನೂ ಕಂಪೆನಿ ಕಾರ್ಯರೂಪಕ್ಕೆ ತಂದಿಲ್ಲ. ಪ್ರತೀ ಸಭೆಯಲ್ಲಿಯೂ ಇದೇ ರೀತಿಯ ಉತ್ತರ ನೀಡಿ ಕಂಪೆನಿ ತಪ್ಪಿಸಿಕೊಳ್ಳುತ್ತಿದೆ. ಗೇಲ್ ಇಂಡಿಯಾ ಕಂಪೆನಿ ಜಿಲ್ಲಾಧಿಕಾರಿ ಆದೇಶಕ್ಕೆ ಕವಡೆ ಕಾಸಿನ ಬೆಲೆ ನೀಡಿಲ್ಲ. ನಮ್ಮಂತ ಸಾಮಾನ್ಯರಿಗೆ ನ್ಯಾಯ ಸಿಗಲು ಸಾಧ್ಯವೇ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿ ಸಭೆ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು. ಬಳಿಕ ಸಂತ್ರಸ್ತರು ಪ್ರತಿಭಟನೆ ಕೈಬಿಟ್ಟಿದ್ದು, 2ಗಂಟೆಗಳ ಕಾಲ ಬಂದ್ ಆಗಿದ್ದ ವಾಹನ ಸಂಚಾರ ಮತ್ತೆ ಆರಂಭಗೊಂಡಿತು.

Latest Indian news

Popular Stories