ಮಂಗಳೂರು, ಸೆ.2: ತನ್ನ ಮೂವರು ಮಕ್ಕಳ ಕುಡಿತದ ಚಟ ಹಾಗೂ ಮನೆಯಲ್ಲಿ ಪದೇ ಪದೇ ಜಗಳವಾಡುತ್ತಿದ್ದರಿಂದ ಮನನೊಂದ ತಾಯಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಮೂವರು ಮಕ್ಕಳನ್ನು ಪೊಲೀಸರು ಬಂಧಿಸಿದ್ದಾರೆ.
ಮೃತರನ್ನು ಮೂಲ್ಕಿ ಸಮೀಪದ ಕೆ ಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡು ಕೊರಂತಬೆಟ್ಟು ಕಾಲೋನಿ ನಿವಾಸಿ ಸುಮಿತ್ರಾ (44) ಎಂದು ಗುರುತಿಸಲಾಗಿದೆ. ಸುಮಿತ್ರಾ ಅವರ ಮಕ್ಕಳಾದ ಮಂಜುನಾಥ (25), ಫಲದ ಅಲಿಯಾಸ್ ಪ್ರಭು (19) ಮತ್ತು ಸಂಜೀವ (22) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಗುರುವಾರ ರಾತ್ರಿ 11.30ರ ಸುಮಾರಿಗೆ ಕ್ಷುಲ್ಲಕ ವಿಚಾರಕ್ಕೆ ಆರೋಪಿಗಳು ತಮ್ಮೊಳಗೆ ಜಗಳ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪದೇ ಪದೇ ಪುತ್ರರ ಜಗಳದಿಂದ ಮನನೊಂದ ಸುಮಿತ್ರಾ ಮನೆಯ ಮೇಲ್ಛಾವಣಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.