ಕೆಎಸ್‌ಆರ್‌ಟಿಸಿ ವಿದ್ಯಾರ್ಥಿ ಪಾಸ್‌ ಅವಧಿ ವಿಸ್ತರಣೆ; ಅಕ್ಟೋಬರ್ ವರೆಗೆ ಪ್ರಯಾಣಕ್ಕೆ ಅವಕಾಶ

ಬೆಂಗಳೂರು: ರಾಜ್ಯದ ಕೆಲವು ಕಾಲೇಜುಗಳು ಇನ್ನೂ ಪರೀಕ್ಷೆಗಳನ್ನು ನಡೆಸದ ಕಾರಣ 2022-23ನೇ ಶೈಕ್ಷಣಿಕ ವರ್ಷಕ್ಕೆ ನೀಡಲಾದ ಕೆಎಸ್‌ಆರ್‌ಟಿಸಿ ವಿದ್ಯಾರ್ಥಿ ಬಸ್ ಪಾಸ್‌ಗಳ ಅವಧಿಯನ್ನು ಅಕ್ಟೋಬರ್‌ವರೆಗೆ ವಿಸ್ತರಿಸಲಾಗಿದೆ.

ಈ ಹಿಂದೆ ಯಾವುದೇ ವೆಚ್ಚವಿಲ್ಲದೆ ಪಾಸ್‌ಗಳ ಅವಧಿನಯ್ನು ವಿಸ್ತರಿಸಲಾಗಿತ್ತು, ಆದರೆ, ಸೆಪ್ಟೆಂಬರ್ ಮತ್ತು ಅಕ್ಟೋಬರ್‌ ತಿಂಗಳಿನಲ್ಲಿ ಪಾಸ್ ಗಳ ಬಳಕೆಗೆ ಹಣವನ್ನು ನೀಡಬೇಕಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹೇಳಿದ್ದಾರೆ.

ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್, ಕಾನೂನು, ಬಿ.ಫಾರಂ, ಕಾನೂನು ಮತ್ತಿತರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪದವಿ ಇನ್ನೂ ಪೂರ್ಣಗೊಂಡಿಲ್ಲ. ಪರೀಕ್ಷೆ ಹಿನ್ನೆಲೆಯಲ್ಲಿ ಈ ಹಿಂದೆ ಜುಲೈ ಮತ್ತು ಆಗಸ್ಟ್ ವರೆಗೆ ಪಾಸ್ ಅವಧಿಯನ್ನು ವಿಸ್ತರಣೆ ಮಾಡಲಾಗಿತ್ತು. ಆದರೆ, ಇನ್ನೂ ಕೆಲ ಕಾಲೇಜುಗಳು ಪರೀಕ್ಷೆಯನ್ನು ನಡೆಸಿಲ್ಲ. ಹೀಗಾಗಿ ಪಾಸ್ ಅವಧಿ ವಿಸ್ತರಿಸುವಂತೆ ಕಾಲೇಜು ವಿದ್ಯಾರ್ಥಿಗಳಿಂದ ಪದೇ ಪದೇ ಮನವಿಗಳು ಬರುತ್ತಿದ್ದವು. ಹೀಗಾಗಿ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಆಯಾ ಕಾಲೇಜುಗಳಿಂದ ಪರೀಕ್ಷಾ ದಿನಾಂಕಗಳ ವಿವರಗಳೊಂದಿಗೆ ಪತ್ರವನ್ನು ಪಡೆದ ವಿದ್ಯಾರ್ಥಿಗಳ ಪಾಸ್ ಅವಧಿಯನ್ನು ಅಕ್ಟೋಬರ್ ವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.

ಆದರೆ, ವಿದ್ಯಾರ್ಥಿಗಳು ತಮ್ಮ ಪಾಸ್ ಅವಧಿಯನ್ನು ವಿಸ್ತರಿಸಲು ಹಳೆಯ ಬಸ್ ಪಾಸ್ ಗಳನ್ನು ಸಲ್ಲಿಸಿ, ಪಾಸ್ ಅವಧಿ ವಿಸ್ತರಿಸಲು ಹಣವನ್ನು ಕಟ್ಟಬೇಕಾಗುತ್ತದೆ ಎಂದು ಹೇಳಿದ್ದಾರೆ.

Latest Indian news

Popular Stories