ಮಳೆಗಾಲ: ಶಾಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಕ್ಕೆ ಶಿಕ್ಷಣ ಇಲಾಖೆ ಸೂಚನೆ

ಬೆಂಗಳೂರು: ಸೋಮವಾರದಿಂದ ಶಾಲೆಗಳು ಪ್ರಾರಂಭವಾಗಲಿದ್ದು, ರಾಜ್ಯದ ಬಹುತೇಕ ಕಡೆ ತೀವ್ರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶೈಕ್ಷಣಿಕ ಉಸ್ತುವಾರಿ ಅಧಿಕಾರಿ/ಸಿಬಂದಿಗೆ ಸೂಚಿಸಲಾಗಿದೆ.

ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳನ್ನು /ತರಗತಿಯ ಕೊಠಡಿ, ಶೌಚಾಲಯಗಳನ್ನು ಬಳಸದೆ ಸಮೀಪದ ಸುಸ್ಥಿತಿಯಲ್ಲಿರುವ ಕಟ್ಟಡ, ಕೊಠಡಿ, ಶೌಚಾಲಯಗಳನ್ನು ಗುರುತಿಸಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ಮಕ್ಕಳು ಇಂತಹ ಕಟ್ಟಡ, ಕೊಠಡಿಗಳ ಮತ್ತು ಶೌಚಾಲಯಗಳ ಸಮೀಪದಲ್ಲಿ ಸುತ್ತಾಡದಂತೆ ಎಚ್ಚರಿಕೆ ವಹಿಸಬೇಕು.

ಪ್ರವಾಹ ಅಥವಾ ನೆರೆ ಬಂದ ಸಂದರ್ಭಗಳಲ್ಲಿ ಸ್ಥಳೀಯ ಗ್ರಾ.ಪಂ., ಪುರಸಭೆ, ನಗರ ಸಭೆ, ಮಹಾನಗರ ಪಾಲಿಕೆಗಳ ಸಹಕಾರದಿಂದ ಶಾಲಾ ಕಟ್ಟಡದಲ್ಲಿ ಸಂಗ್ರಹವಾಗಿರುವ ನೀರನ್ನು ತೆರವು ಗೊಳಿಸಬೇಕು. ಅಗತ್ಯಾನುಸಾರ ಶಾಲಾ ಮುಖ್ಯೋಪಾಧ್ಯಾಯರು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಜಿಲ್ಲಾ ಉಪನಿರ್ದೇಶಕರ ಅನುಮತಿ ಪಡೆದು ಶಾಲೆಗಳಿಗೆ ರಜೆ ಘೋಷಿಸಬೇಕು. ಅಂತಹ ರಜಾ ದಿನಗಳ ಪಾಠ-ಪ್ರವಚನಗಳನ್ನು ಮುಂದಿನ ಸರಕಾರಿ ರಜಾ ದಿನಗಳಲ್ಲಿ ಸರಿದೂಗಿಸಬೇಕು.

ಆರೋಗ್ಯ ಇಲಾಖೆ, ಸ್ಥಳೀಯ ಸಂಸ್ಥೆಗಳ ಮತ್ತು ತಾಲೂಕು/ ಜಿಲ್ಲಾಡಳಿತಗಳ ಸಹಕಾರದೊಂದಿಗೆ ಅಗತ್ಯ ಕ್ರಮಗಳನ್ನು ಸಕಾಲದಲ್ಲಿ ಕೈಗೊಳ್ಳಬೇಕು. ಮಳೆಯಿಂದ ವಿದ್ಯಾರ್ಥಿಗಳ ಜೀವ ಹಾನಿ ಆಗದಂತೆ ಅಗತ್ಯ ಸುರಕ್ಷಾ ಕ್ರಮ ತೆಗೆದುಕೊಂಡು ತರಗತಿ ನಡೆಸಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Latest Indian news

Popular Stories