ರಾಷ್ಟ್ರಪತಿ ಮುರ್ಮು ಶಿಕ್ಷಣ ರಂಗದ ಕುರಿತು ಮಾತು; ನೀಟ್ ಹಗರಣ ಕುರಿತು ವಿಪಕ್ಷಗಳ ಪ್ರತಿಭಟನೆ

ನವದೆಹಲಿ: ಇತ್ತೀಚಿನ ಪರೀಕ್ಷೆಯ ಪತ್ರಿಕೆ ಸೋರಿಕೆ ಘಟನೆಗಳ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಸಂಪೂರ್ಣವಾಗಿ ಬದ್ಧವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದರು.

ಮೊದಲ ಬಾರಿಗೆ 18 ನೇ ಲೋಕಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ದೇಶದ ಯುವಜನತೆ ದೊಡ್ಡ ಕನಸು ಕಾಣಲು ಮತ್ತು ಅವುಗಳನ್ನು ಸಾಧಿಸಲು ಅನುವು ಮಾಡಿಕೊಡುವ ವಾತಾವರಣವನ್ನು ಸೃಷ್ಟಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಶಿಕ್ಷಣ ರಂಗದಲ್ಲಿ ಸರ್ಕಾರ ಕೈಗೊಂಡ ಕ್ರಮಗಳನ್ನು ಅವರು ಪ್ರಸ್ತಾಪಿಸುತ್ತಿದ್ದಂತೆ, ಕೆಲವು ವಿರೋಧ ಪಕ್ಷದ ಸದಸ್ಯರು ನೀಟ್, ನೆಟ್ ಎಂದು ಕೂಗಿದರು. ಯಾವುದೇ ಕಾರಣದಿಂದ ಪರೀಕ್ಷೆಯಲ್ಲಿ ಅಡಚಣೆ ಉಂಟಾದರೆ ಅದು ಸೂಕ್ತವಲ್ಲ, ಸರ್ಕಾರಿ ನೇಮಕಾತಿ ಮತ್ತು ಪರೀಕ್ಷೆಗಳಲ್ಲಿ ಪಾವಿತ್ರ್ಯತೆ, ಪಾರದರ್ಶಕತೆ ಅತ್ಯಗತ್ಯ ಎಂದು ರಾಷ್ಟ್ರಪತಿಗಳು ಹೇಳಿದರು. ಇತ್ತೀಚಿನ ಪೇಪರ್ ಸೋರಿಕೆ ಘಟನೆಗಳಲ್ಲಿ ನ್ಯಾಯಯುತ ತನಿಖೆ ನಡೆಸಲು ಮತ್ತು ತಪ್ಪಿತಸ್ಥರಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದರು.

ಈ ಹಿಂದೆಯೂ ಕೆಲವು ರಾಜ್ಯಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯ ಘಟನೆಗಳು ನಡೆದಿವೆ, ಪಕ್ಷಪಾತದ ರಾಜಕೀಯವನ್ನು ಮೀರಿ ರಾಷ್ಟ್ರಮಟ್ಟದಲ್ಲಿ ಬಲವಾದ ಹೆಜ್ಜೆಗಳನ್ನು ಇಡುವ ಅಗತ್ಯವಿದೆ ಎಂದರು.

ನೀಟ್ ಪರೀಕ್ಷೆ ಪತ್ರಿಕೆ ಸೋರಿಕೆ ವಿರುದ್ಧ ಸಂಸತ್ತು ಕೂಡ ಬಲವಾದ ಕಾನೂನನ್ನು ಮಾಡಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ಪರೀಕ್ಷಾ ಪ್ರಕ್ರಿಯೆಯಲ್ಲಿ ಸುಧಾರಣೆಗಳನ್ನು ತರಲು ಸರ್ಕಾರ ಕೆಲಸ ಮಾಡುತ್ತಿದೆ ಎಂದರು.

ತುರ್ತು ಪರಿಸ್ಥಿತಿ ಸಂವಿಧಾನ ಮೇಲೆ ನೇರ ದಾಳಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 1975 ರಲ್ಲಿ ತುರ್ತುಪರಿಸ್ಥಿತಿ ಹೇರಿಕೆಯನ್ನು ಸಂವಿಧಾನದ ಮೇಲಿನ ನೇರ ದಾಳಿಯ “ದೊಡ್ಡ ಮತ್ತು ಕರಾಳ ಅಧ್ಯಾಯ” ಎಂದು ಬಣ್ಣಿಸಿದರು. ಅಂತಹ ಅಸಂವಿಧಾನಿಕ ಶಕ್ತಿಗಳ ವಿರುದ್ಧ ದೇಶವು ಗೆದ್ದುಬಂದಿದೆ ಎಂದರು.

ಸಂವಿಧಾನ ಜಾರಿಗೆ ಬಂದ ನಂತರವೂ ಸಂವಿಧಾನದ ಮೇಲೆ ಹಲವಾರು ದಾಳಿಗಳು ನಡೆದಿವೆ. ಜೂನ್ 25, 1975 ರಂದು ತುರ್ತು ಪರಿಸ್ಥಿತಿ ಹೇರಿದ್ದು ಸಂವಿಧಾನದ ಮೇಲಿನ ನೇರ ದಾಳಿಯ ಅತಿದೊಡ್ಡ ಮತ್ತು ಕರಾಳ ಅಧ್ಯಾಯವಾಗಿದೆ. ಇಡೀ ದೇಶವು ಆಕ್ರೋಶಗೊಂಡಿತು. ಆದರೆ ಗಣರಾಜ್ಯದ ಸಂಪ್ರದಾಯಗಳಂತಹ ಅಸಂವಿಧಾನಿಕ ಶಕ್ತಿಗಳ ವಿರುದ್ಧ ದೇಶವು ವಿಜಯಶಾಲಿಯಾಗಿದೆ ಎಂದರು.

ತಮ್ಮ ಭಾಷಣದಲ್ಲಿ ತುರ್ತು ಪರಿಸ್ಥಿತಿಯನ್ನು ಉಲ್ಲೇಖಿಸಿದಾಗ ಕೆಲವು ವಿರೋಧ ಪಕ್ಷದ ಸದಸ್ಯರು ಗದ್ದಲದ ಪ್ರತಿಭಟನೆ ನಡೆಸಿದರು. ಆದರೆ, ರಾಷ್ಟ್ರಪತಿಗಳು ಯಾರ ಹೆಸರನ್ನೂ ಉಲ್ಲೇಖಿಸಿರಲಿಲ್ಲ.

Latest Indian news

Popular Stories