ಎಕ್ಸಿಟ್ ಪೋಲ್ ಚರ್ಚೆಗಳಲ್ಲಿ ಭಾಗವಹಿಸಲು INDIA ಬಣದ ಪಕ್ಷಗಳು ನಿರ್ಧಾರ: ಪವನ್ ಖೇರಾ

ನವದೆಹಲಿ: ಟಿವಿ ಚಾನೆಲ್ ಗಳಲ್ಲಿ ಇಂದು ಸಂಜೆ ಎಕ್ಸಿಟ್ ಪೋಲ್ ಚರ್ಚೆಗಳಲ್ಲಿ ಭಾಗವಹಿಸುವುದಾಗಿ INDIA ಬಣದ ಪಕ್ಷಗಳು ಶನಿವಾರ ಘೋಷಿಸಿವೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ನಾಯಕರ ಚರ್ಚೆ ಮತ್ತು ಸಮಾಲೋಚನೆ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.

ನಿನ್ನೆ ಯಾವುದೇ ಟಿವಿ ಚಾನೆಲ್ ಗಳಲ್ಲಿ ಎಕ್ಸಿಟ್ ಪೋಲ್ ಚರ್ಚೆಗಳಲ್ಲಿ ಭಾಗವಹಿಸುವುದಿಲ್ಲ. ಟಿಆರ್‌ಪಿಗಾಗಿ ಊಹಾಪೋಹಗಳಲ್ಲಿ ಮುಳುಗಲು ಬಯಸುವುದಿಲ್ಲ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ, ಇದೀಗ ತಮ್ಮ ನಿಲುವು ಬದಲಾಯಿಸಲಾಗಿದ್ದು, ಬಿಜೆಪಿ ಮತ್ತು ಅದರ ಪೂರ್ವ ನಿರ್ಧರಿತ ಸಮೀಕ್ಷೆ ಕುರಿತು ಬಹಿರಂಗಪಡಿಸಲು INDIA ಬಣದ ಪಕ್ಷಗಳು ಸಭೆ ಸೇರಿ ತೀರ್ಮಾನ ಕೈಗೊಂಡಿರುವುದಾಗಿ ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಹೇಳಿದ್ದಾರೆ.

ಪರ ಮತ್ತು ವಿರೋಧದ ಅಂಶಗಳನ್ನು ಪರಿಗಣಿಸಿದ ನಂತರ ಎಲ್ಲಾ INDIA ಬಣದ ಪಕ್ಷಗಳು ಇಂದು ಸಂಜೆ ಟಿವಿ ಚಾನೆಲ್ ಗಳ ಎಕ್ಸಿಟ್ ಪೋಲ್ ಚರ್ಚೆಗಳಲ್ಲಿ ಭಾಗವಹಿಸಲು ಒಮ್ಮತದಿಂದ ನಿರ್ಧರಿಸಲಾಗಿದೆ” ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಿಳಿಸಿದ್ದಾರೆ.

ಜನರು ಮತ ಚಲಾಯಿಸಿದ್ದಾರೆ ಮತ್ತು ಅವರ ತೀರ್ಪು ಸುರಕ್ಷಿತವಾಗಿದೆ. “ಫಲಿತಾಂಶಗಳು ಜೂನ್ 4 ರಂದು ಹೊರಬೀಳುತ್ತವೆ. ಅದಕ್ಕೂ ಮೊದಲು, ಟಿಆರ್‌ಪಿಗಾಗಿ ಊಹಾಪೋಹದ ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ ಪವನ್ ಖೇರಾ ಶುಕ್ರವಾರ ಹೇಳಿದ್ದರು. ಕಾಂಗ್ರೆಸ್ ನಿರ್ಧಾರ ಲೋಕಸಭೆ ಚುನಾವಣೆಯನ್ನು ವಿರೋಧ ಪಕ್ಷ ಒಪ್ಪಿಕೊಂಡಿದೆ ಎಂಬುದಕ್ಕೆ ದೃಢೀಕರಣವಾಗಿದೆ ಎಂದು ಅಮಿತ್ ಶಾ, ಜೆಪಿ ನಡ್ಡಾ ಹೇಳಿದ್ದರು.

Latest Indian news

Popular Stories