ಲೋಕಸಭಾ ಚುನಾವಣಾ ಗೆಲುವು ಪಕ್ಷದ ಕಾರ್ಯಕರ್ತರಿಗೆ ಅರ್ಪಣೆ: ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ

ಭಾರತೀಯ ಜನತಾ ಪಾರ್ಟಿಯ ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸಿ ನನ್ನ ಪಾರ್ಟಿ ಅಗಾಧವಾದ ಬಹುಮತದಿಂದ ಗೆಲ್ಲುವ ಅವಕಾಶವನ್ನು ಮಾಡಿಕೊಟ್ಟಿದೆ. ಈ ಗೆಲುವನ್ನು ಪಕ್ಷದ ಕಾರ್ಯಕರ್ತರಿಗೆ ಅರ್ಪಿಸುತ್ತೇನೆ ಎಂದು ಉಡುಪಿ-ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದ ನೂತನ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಬಿಜೆಪಿ ಉಡುಪಿ ಜಿಲ್ಲಾ ಕಛೇರಿಯ ಬಳಿ ಮಾಧ್ಯಮ ವರದಿಗಾರರನ್ನುದ್ದೇಶಿಸಿ ಮಾತನಾಡಿದರು.

ನಾನು ಚುನಾವಣೆಗೆ ನಿಂತಾಗ ಉಡುಪಿ, ಚಿಕ್ಕಮಗಳೂರು ಎರಡೂ ಜಿಲ್ಲೆಗಳಲ್ಲಿ ಎರಡೂ ಜಿಲ್ಲೆಗಳಲ್ಲಿ ಸುಮಾರು 1,900 ಮತಗಟ್ಟೆಯಲ್ಲಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಆವಿಶ್ರಾಂತವಾಗಿ ದುಡಿದು, ಎರಡೂ ಜಿಲ್ಲೆಯ ಜಿಲ್ಲಾಧ್ಯಕ್ಷರ ತಂಡ ಮತ್ತು ಉಡುಪಿ ಜಿಲ್ಲೆಯ ಎಲ್ಲ ಐದು ಮಂದಿ ಶಾಸಕರು ಚಿಕ್ಕಮಗಳೂರು ಜಿಲ್ಲೆಯ ಪಕ್ಷದ ಮುಖಂಡರು ಎಲ್ಲರೂ ಒಟ್ಟಾಗಿ ಒಂದಾಗಿ ಪರಿಶ್ರಮದಿಂದ ಕೆಲಸ ಮಾಡಿದುದರಿಂದ, ಬಿ.ಎಸ್. ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ, ಹೆಚ್.ಡಿ. ದೇವೇಗೌಡ, ಹೆಚ್.ಡಿ ಕುಮಾರಸ್ವಾಮಿಯವರಂತಹ ಗಣ್ಯರು, ಬಿಜೆಪಿ ಮತ್ತು ಜೆಡಿಎಸ್ ನ ಕಾರ್ಯಕರ್ತರು ಎಲ್ಲರೂ ಒಟ್ಟಾಗಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ನಾನು ನಿರೀಕ್ಷೆಗೂ ಮೀರಿ 2,59,175 ಮತಗಳ ಅಂತರದಿಂದ ಬಹು ದೊಡ್ಡ ಗೆಲುವನ್ನು ತಂದು ಕೊಟ್ಟ ನನ್ನ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಎಲ್ಲ ಮುಖಂಡರಿಗೆ, ನಮ್ಮೆಲ್ಲಾ ಕಾರ್ಯಕರ್ತರಿಗೆ, ಆಹರ್ನಿಶಿ ದುಡಿದ ಎಲ್ಲಾ ಬಂಧುಗಳಿಗೆ ಮತ್ತು ನನ್ನ ಮೇಲೆ ವಿಶ್ವಾಸವಿರಿಸಿ, ನನ್ನ ಪಕ್ಷದ ಮೇಲೆ ವಿಶ್ವಾಸವಿರಿಸಿ ನನ್ನ ಮುಖಂಡರಾದ ನರೇಂದ್ರ ಮೋದಿಯವರ ದೇಶ ಕಟ್ಟುವಂತಹ ಕೆಲಸಕ್ಕೆ ಬೆಂಬಲ ಕೊಟ್ಟು ಮತ ನೀಡಿದಂತಹ ಲಕ್ಷಾಂತರ ಮತದಾರರಿಗೆ ಭಾವುಕತೆಯಿಂದ ಧನ್ಯವಾದಗಳನ್ನು ಸಮರ್ಪಣೆ ಮಾಡುತ್ತಿದ್ದೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ನಿಕಟಪೂರ್ವ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಹಿಳಾ ಮೋರ್ಚಾ ನಿಕಟಪೂರ್ವ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ರೈತ ಮೋರ್ಚಾ ನಿಕಟಪೂರ್ವ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಘವೇಂದ್ರ ಉಪ್ಪೂರು, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನಳಿನಿ ಪ್ರದೀಪ್ ರಾವ್, ಜಿಲ್ಲಾ ವಕ್ತಾರ ವಿಜಯ ಕುಮಾರ್ ಉದ್ಯಾವರ ಮತ್ತಿತರರು ಉಸ್ಥಿತರಿದ್ದರು.

Latest Indian news

Popular Stories