
ಬೀದರ್: ಒಂದು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಾಗಿ ಶನಿವಾರ ಬಹುತೇಕ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ. ಯಾವುದೇ ಅಹಿತಕರ ಘಟನೆ ಮಧ್ಯಾಹ್ನದವರೆಗೆ ವರದಿಯಾಗಿಲ್ಲ.
ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಮತದಾನ ನಡೆದಿದೆ. ಮೂಲಗಳ ಪ್ರಕಾರ ಮಧ್ಯಾಹ್ನ 1 ಗಂಟೆಯವರೆಗೆ ಈ ಕ್ಷೇತ್ರದಲ್ಲಿ ಶೇ. 52.26 ರಷ್ಟು ಮತದಾನವಾಗಿದೆ. ಬಹುತೇಕ ಎಲ್ಲೆಡೆ ಮತದಾರರ ಉದ್ದನೆಯ ಸಾಲುಗಳು ಕಂಡು ಬಂದಿದೆ.
ಆದರೆ, ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮಧ್ಯಾಹ್ನದವರೆಗೆ ಮತದಾರರು ಅಷ್ಟೇನು ಉತ್ಸಾಹ ತೋರಿಸಿಲ್ಲ. ಬಸವಕಲ್ಯಾಣದಲ್ಲಿ ಮಧ್ಯಾಹ್ನ 1 ರವರೆಗೆ 36.42 ರಷ್ಟು ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಶೇ. 37,73 ರಷ್ಟು ಮತದಾನವಾಗಿದೆ ಎಂದು ಮೂಲಗಳು ತಿಳಿಸಿವೆ. ಮತದಾನ ಮುಂದುವರೆದಿದೆ.
ಸಾಮಾನ್ಯವಾಗಿ ಉಪಚುನಾವಣೆಯಲ್ಲಿ ಮತದಾನದ ಪ್ರಮಾಣ ಅಧಿಕ. ಅಧಿಕ ಸಂಖ್ಯೆಯ ಮತದಾರರನ್ನು ತಲುಪಲು ಸಾಧ್ಯವಾಗುವುದರಿಂದ ಮತದಾನದ ಪ್ರಮಾಣವೂ ಹೆಚ್ಚುತ್ತದೆ. ಈ ಬಾರಿಯೂ ಮತದಾನ ಪ್ರಮಾಣ ಹೆಚ್ಚುವ ಸಾಧ್ಯತೆ ಇದೆ.
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಬೆಳಗ್ಗೆ 11 ರವರೆಗೆ ಉತ್ತಮ ಮತದಾನವಾಗಿದೆ. ಬಿಸಿಲಿನ ಕಾರಣ ಮಧ್ಯಾಹ್ನ ಮತದಾನ ನಿರಸವಾಗಿತ್ತು. ಬಿಸಿಲು ಇಳಿಯುತ್ತಲೇ ಮತದಾರರು ಮತಗಟ್ಟೆಯತ್ತ ತೆರಳುವ ಸಾಧ್ಯತೆ ಇದೆ. ಬೆಳಗಾವಿ ಮಸ್ಕಿಯಲ್ಲೂ ಅಧಿಕ ಪ್ರಮಾಣದಲ್ಲಿ ಮತದಾನವಾಗುವ ನಿರೀಕ್ಷೆ ಇದೆ.




