
ಬಸವಕಲ್ಯಾಣ ಗೆಲುವು, ಅಭಿವೃದ್ಧಿಗೆ ದೊರೆತ ಅಭೂತಪೂರ್ವ ಬೆಂಬಲ
ಬೀದರ್: ಬಸವಕಲ್ಯಾಣ ಉಪಚುನಾವಣೆಯಲ್ಲಿನ ಗೆಲುವು ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರಕಾರದ ಅಭಿವೃದ್ಧಿ ಯೋಜನೆಗಳಿಗೆ ಸಿಕ್ಕ ಜನ ಬೆಂಬಲವಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಾನಂದ ಮಂಠಾಳಕರ್ ತಿಳಿಸಿದ್ದಾರೆ.
ಬಸವಕಲ್ಯಾಣ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ಹರ್ಷ ವ್ಯಕ್ತಪಡಿಸಿರುವ ಅವರು, ಬಿಜೆಪಿ ಪಾಲಿಗೆ ಇದೊಂದು ಸಂತಸದ ಸಂಗತಿ ಎಂದಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರಕಾರದ ಸಾಧನೆ, ಪಕ್ಷದ ನಾಯಕರ ಸಂಘಟಿತ ಪ್ರಚಾರ ಅಭ್ಯರ್ಥಿ ಶರಣು ಸಲಗರ್ ಅವರ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಅದ್ಯಕ್ಷರು, ಮುಖ್ಯಮಂತ್ರಿಯವರು, ಸಚಿವರು, ಕ್ಷೇತ್ರದ ಚುನಾವಣಾ ಉಸ್ತುವಾರಿಗಳು, ಸಂಸದರು, ಮತ್ತಿತರ ಜನಪ್ರತಿನಿಧಿಗಳು, ಪದಾಧಿಕಾರಿಗಳು ಹಾಗೂ ಮುಖಂಡರು ಬಸವಕಲ್ಯಾಣ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು. ಸರಕಾರದ ಸಾಧನೆಗಳನ್ನು, ಕಲ್ಯಾಣ ಕಾರ್ಯಕ್ರಮಗಳನ್ನು ತಿಳಿಸಿಕೊಟ್ಟಿದ್ದರು. ಪಕ್ಷದ ಈ ಸಂಘಟಿತ ಶ್ರಮವು ಮತದಾರ ಮನ ಬದಲಾಗುವಂತೆ ಮಾಡಿದೆ. ಬಸವಕಲ್ಯಾಣದ ಮತದಾರರು ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಅಭಿವೃದ್ಧಿಪರ ನಿಲುವ ವ್ಯಕ್ತಪಡಿಸಿದ್ದಾರೆ ಎಂದು ಶಿವಾನಂದ ಮಂಠಾಳಕರ್ ತಿಳಿಸಿದ್ದಾರೆ.
ಜನರ ಬದುಕನ್ನು ಉತ್ತಮಗೊಳಿಸಲು ಬಿಜೆಪಿ ಆರಂಭದಿAದಲೂ ಶ್ರಮಿಸುತ್ತ ಬಂದಿದೆ. ಅದು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ, ಇನ್ನಷ್ಟು ವೇಗವಾಗಿ ಮುಂದುವರೆಯಲಿದೆ. ಬಸವಕಲ್ಯಾಣ ಉಪಚುನಾವಣೆಯಲ್ಲಿ ಪಕ್ಷವನ್ನು ಬೆಂಬಲಿಸಿದ, ಮತ ನೀಡಿದ ಎಲ್ಲದ ಮತದಾರರಿಗೆ, ಬೆಂಬಲಿಗರಿಗೆ, ಪಕ್ಷದ ನಾಯಕರಿಗೆ ಕೃತಜ್ಞತೆ ಸಲ್ಲಿಸಲಾಗುತ್ತದೆ ಎಂದು ಶಿವಾನಂದ ತಿಳಿಸಿದ್ದಾರೆ.




