ಲೋಕ ಸಭಾ ಚುನಾವಣೆ ವಿಶ್ಲೇಷಣೆ:
ಲೋಕಸಭಾ ಚುನಾವಣೆ 2024 ಹತ್ತಿರವಾಗುತ್ತಿದ್ದಂತೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಚರ್ಚೆಯಲ್ಲಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎಂಬ ಮಾತಿದೆ. ಈ ಮಾತಿಗೆ ಪುಷ್ಠಿ ನೀಡುವುದು ಈ ಬಾರಿ ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿರುವುದು.
2019 ರ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಶೋಭಾ ಕರಂದ್ಲಾಜೆ 7,18,916 ಮತಗಳನ್ನು ಪಡೆದಿದ್ದರೆ ಜೆ.ಡಿಎಸ್-ಕಾಂಗ್ರೇಸ್ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ನಿಂದ ಕಣಕ್ಕಿಳಿದಿದ್ದ ಪ್ರಮೋದ್ ಮಧ್ವರಾಜ್ 3,69,317 ಮತಗಳನ್ನು ಪಡೆದಿದ್ದರು. ಒಟ್ಟು 3,49,599 ಮತಗಳ ಬೃಹತ್ ಅಂತರದಿಂದ ಬಿಜೆಪಿ ಗೆಲುವು ಸಾಧಿಸಿತ್ತು. ಇದಕ್ಕೆ ಪ್ರಮುಖ ಕಾರಣ 2019 ರ ಚುನಾವಣೆಯ ಸಂದರ್ಭದಲ್ಲಿ ಚಿಕ್ಕಮಗಳೂರಿನ ಐದು ಕ್ಷೇತ್ರದಲ್ಲಿ 4 ರಲ್ಲಿ ಬಿಜೆಪಿ ಶಾಸಕರಿದ್ದರೆ, ಉಡುಪಿ ಜಿಲ್ಲೆಯ ಐದು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರು. ಆದರೆ 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಜೆಪಿಗೆ ದೊಡ್ಡ ಹೊಡೆತ ಬಿದ್ದಿದ್ದು ಐದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ಉಡುಪಿ ಜಿಲ್ಲೆಯಲ್ಲಿ ಯಥಾಸ್ಥಿತಿ ಮುಂದುವರಿದಿದೆ.
ಮತದಾರರ ಲೆಕ್ಕಚಾರ:
2019ರಲ್ಲಿ ಉಡುಪಿ -ಚಿಕ್ಕ ಮಗಳೂರು ಕ್ಷೇತ್ರದಲ್ಲಿ 15,13,116 ರಷ್ಟಿದ್ದ ಮತದಾರರ ಸಂಖ್ಯೆ ಈಗ 15,65,339ಕ್ಕೆ ಏರಿದೆ. 2019ರಲ್ಲಿ 30,845 ಮಂದಿ ಯುವ ಮತದಾರರು ನೋಂದಣಿ ಮಾಡಿಸಿಕೊಂಡಿದ್ದು, ಈ ಬಾರಿ ಇದುವರೆಗೆ 28,149 ಮಂದಿ ನೋಂದಾಯಿಸಿಕೊಂಡಿದ್ದಾರೆ.
ಶೋಭಾ ಕರಂದ್ಲಾಜೆ ಕುರಿತು ಇರುವ ಅಸಮಾಧಾನ:
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಎರಡು ಬಾರಿ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಆದರೆ ಅವರ ಕಾರ್ಯದ ಕುರಿತು ಸ್ವತಃ ಸ್ಥಳೀಯ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಇದೆ. 2019 ರ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಬಾರದು ಎಂಬ ಕೂಗು ಕೇಳಿ ಬಂದಿತ್ತು. ಕೊನೆ ಕ್ಷಣದಲ್ಲಿ ಅವರಿಗೆ ಟಿಕೆಟ್ ನೀಡಲಾಗಿತ್ತು. ಮೋದಿಯ ಹೆಸರು ಹೇಳಿ ಕಾರ್ಯಕರ್ತರನ್ನು ಮನವೊಲಿಸಿ ಗೆಲ್ಲಿಸುವ ಪ್ರಯತ್ನ ನಡೆಸಿ ಯಶಸ್ವಿಯಾಗಿದ್ದರು. ಇದೀಗ ಮತ್ತೆ ಗೋ ಬ್ಯಾಕ್ ಶೋಭಾ ಎಂದು ಸಾಮಾಜಿಕ ಜಾಲಾತಾಣದಲ್ಲಿ ಅಭಿಯಾನ ನಡೆಸುತ್ತಿದ್ದಾರೆ. ಇತ್ತೀಚಿಗೆ ಮೀನುಗಾರ ಮುಖಂಡರು ರಸ್ತೆ ಅಭಿವೃದ್ಧಿ ಕಾರ್ಯದ ನಿಧನಗತಿಯ ಕುರಿತು ಸಂಸದೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು ಇದು ಬಿಜೆಪಿಗೆ ಮುಜುಗರ ಉಂಟು ಮಾಡಿತ್ತು.
ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ಚರಾಜ್ ಈ ಬಾರಿ ಬಿಜೆಪಿಗೆ ಪಕ್ಷಾಂತರಗೊಂಡಿದ್ದು ಲೋಕಸಭಾ ಚುನಾವಣೆಯ ಪ್ರಬಲ ಆಕಾಂಕ್ಷಿ ಹಾಗಾಗಿ ಬಿಜೆಪಿಗೆ ಈ ಬಾರಿ ಟಿಕೆಟ್ ನಿರ್ಧಾರ ಕೂಡ ತುಸು ಕ್ಲಿಷ್ಟಕರ ಎನಿಸಿದೆ. ಮೊಗವೀರ ಸಮಯದಾಯದ ಮುಖಂಡರು ಅವರಿಗೆ ಟಿಕೆಟ್ ನೀಡುವಂತೆ ಪತ್ರಿಕಾಗೋಷ್ಠಿ ಕೂಡ ಆಯೋಜಿಸಿದ್ದರು.
ಈತನ್ಮಧ್ಯೆ ಕಾಂಗ್ರೆಸ್ ಬಿಜೆಪಿಯನ್ನು ಕಟ್ಟಿ ಹಾಕಲು ಯಾರನ್ನೂ ಕಣಕ್ಕಿಳಿಸಲಿದೆ ಎಂಬುವುದೇ ಯಕ್ಷ ಪ್ರಶ್ನೆ. ಈಗಾಗಲೇ ಕೇಳಿ ಬರುವ ಹೆಸರು ಪ್ರಸ್ತುತ ಬಿಜೆಪಿಯಲ್ಲಿದ್ದರೂ ಜಾತ್ಯತೀತವೊಲವನ್ನು ಉಳಿಸಿಕೊಂಡು ಬಂದಿರುವ, 2012 ರಲ್ಲಿ ಬಿಜೆಪಿಯನ್ನು ಸೋಲಿಸಿ 45724 ಮತಗಳ ಅಂತರದಿಂದ ಗೆದ್ದ ಜಯಪ್ರಕಾಶ್ ಹೆಗ್ಡೆಯವರದ್ದು. ಅದರೊಂದಿಗೆ ಸೈದ್ದಾಂತಿಕ ನೆಲೆಗಟ್ಟಿನಲ್ಲಿ ಪಕ್ಷ ಕಟ್ಟುತ್ತಿರುವ ಇನ್ನೊಂದು ಹೆಸರು ಸುಧೀರ್ ಕುಮಾರ್ ಮುರೋಳಿಯವರದ್ದು.
ಸದ್ಯದ ಮಾಹಿತಿಯ ಪ್ರಕಾರ ಹೈಕಮಾಂಡ್ ಬಿಜೆಪಿ ನಾಗಾಲೋಟಕ್ಕೆ ಬ್ರೇಕ್ ಹಾಕಲು ಮತ್ತು ಉಡುಪಿ-ಚಿಕ್ಕಮಗಳೂರಿನಲ್ಲಿ ಗಣನೀಯವಾದ ಬೆಂಬಲಿತರನ್ನು ಹೊಂದಿರುವ ಬಿಜೆಪಿಗೆ ಠಕ್ಕರ್ ನೀಡಬಲ್ಲ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯಾಗಿರುವುದರಿಂದ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ. ಆದರೆ ಬಿಜೆಪಿಗೆ ಪಕ್ಷಾಂತರಗೊಂಡು ಕಾಂಗ್ರೆಸ್ ಕಾರ್ಯಕರ್ತರ ಮುನಿಸಿಗೆ ಕಾರಣವಾಗಿರುವ ಅವರನ್ನು ಮತ್ತೆ ಪಕ್ಷಕ್ಕೆ ಕರೆತರುವುದು ಬೇಡ ಎಂಬ ಅಪಸ್ವರ ಕೂಡ ಮುನ್ನಲೆಯಲ್ಲಿದೆ.
ಜಾತಿ ಲೆಕ್ಕಚಾರ:
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಉಡುಪಿಯಲ್ಲಿ ಬಿಲ್ಲವ, ಬಂಟ್ಸ್ ಮತ್ತು ಮೊಗವೀರರು ಪ್ರಬಲ ಜಾತಿಗಳಾದರೆ ಚಿಕ್ಕಮಗಳೂರಿನಲ್ಲಿ ಒಕ್ಕಲಿಗ,ಲಿಂಗಾಯತ ಸಮುದಾಯಗಳು ಪ್ರಾಬಲ್ಯ ಹೊಂದಿದೆ. ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಕೂಡ ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ.
ಈ ಎಲ್ಲ ವಿಚಾರಗಳ ವಿಶ್ಲೇಷಣೆಯ ಹೊರತಾಗಿಯೂ ಬಿಜೆಪಿಗೆ ಈ ಬಾರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಸುಲಭವಾಗಿ ಗೆಲುವು ಸಾಧಿಸಲು ಸಾಧ್ಯಯಿಲ್ಲ. ಅದಕ್ಕೆ ಪ್ರಮುಖ ಕಾರಣ ಬಿಜೆಪಿಗೆ ಈ ಬಾರಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಶಾಸಕರ ಕೊರತೆ ಎದ್ದು ಕಾಣುತ್ತಿರುವುದಾಗಿದೆ. ಕಾರ್ಯಕರ್ತರ ಉತ್ಸಾಹ ಕೂಡ ಕುಗ್ಗಿದ್ದು ಹಿಂದುತ್ವದ ಅಜೆಂಡಾದೊಂದಿಗೆ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ಪ್ರಯತ್ನಿಸುತ್ತಿದ್ದರೆ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆ, ಕೇಂದ್ರ ಸರಕಾರದ ವೈಫಲ್ಯ ಮುಂದಿಟ್ಟುಕೊಂಡು ಕಾಂಗ್ರೆಸ್ ಜನರ ಬಳಿ ತಲುಪಲು ಪ್ರಯತ್ನಿಸುತ್ತಿದೆ. ಹಿಂದುತ್ವದ ಪ್ರಬಲ ಆಸರೆಯೊಂದಿಗೆ ಕಣಕ್ಕಿಳಿಯುತ್ತಿರುವ ಬಿಜೆಪಿ ಮತದಾರರನ್ನು ಮತ್ತೆ ಒಲಿಸಿಕೊಳ್ಳಬಹುದೇ ಎಂಬುವುದನ್ನು ಕಾದು ನೋಡಬೇಕಾಗಿದೆ.