ಇಂದಿನಿಂದ ಎಲ್.ಕೆ.ಜಿ, ಯುಕೆಜಿ , ಅಂಗನವಾಡಿ ಆರಂಭ

ಕೊರೊನಾ ಹಿನ್ನೆಲೆ 2020ರ ಮಾರ್ಚ್‌ನಿಂದ ಸರಕಾರ ವಿಧಿಸಿದ್ದ ಮೊದಲ ಲಾಕ್‌ಡೌನ್‌ ವೇಳೆ ಮುಚ್ಚಿದಂತಹ ಅಂಗನವಾಡಿ ಕೇಂದ್ರಗಳು ಹಾಗೂ ಯುಕೆಜಿ, ಎಲ್‌ಕೆಜಿ ತರಗತಿಗಳು ಒಂದೂವರೆ ವರ್ಷದ ಬಳಿಕ ಸೋಮವಾರದಿಂದ ರಾಜ್ಯಾದ್ಯಂತ ಆರಂಭಗೊಳ್ಳುತ್ತಿವೆ.

ಕೊರೊನಾನಿಂದ ಮಕ್ಕಳನ್ನು ರಕ್ಷಿಸುವ ನಿಟ್ಟಿನಲ್ಲಿ ಸರಕಾರ ಶಾಲಾ ಕಾಲೇಜುಗಳನ್ನು ಸ್ಥಗಿತಗೊಳಿಸಲಾಗಿತ್ತು. ಕೊರೊನಾ ನಿಯಂತ್ರಣಕ್ಕೆ ಬಂದ ಬಳಿಕ ಹಂತ ಹಂತವಾಗಿ ಶಾಲಾ ಕಾಲೇಜುಗಳನ್ನು ಆರಂಭಿಸಿದೆ. ಮುಂದುವರಿದ ಭಾಗವಾಗಿ ಅಂಗನವಾಡಿ ಕೇಂದ್ರಗಳು ಹಾಗೂ ಯುಕೆಜಿ, ಎಲ್‌ಕೆಜಿ ತರಗತಿಗಳನ್ನು ಆರಂಭಿಸಲು ಸರಕಾರ ನಿರ್ಧರಿಸಿದೆ.

ಒಂದೂವರೆ ವರ್ಷಗಳಿಂದ ಅಂಗನವಾಡಿ ಕೇಂದ್ರವು ಸ್ಥಗಿತವಾಗಿತ್ತು. ಲಾಕ್‌ಡೌನ್‌ ಮತ್ತು ನಂತರದ ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಹಾಗೂ ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸರಕಾರದ ಯೋಜನೆಗಳನ್ನು ತಲುಪಿಸುತ್ತಿದ್ದರು. ಆದರೆ ಮಕ್ಕಳು ಅಂಗನವಾಡಿ ಕೇಂದ್ರಗಳಿಗೆ ಬರುತ್ತಿರಲಿಲ್ಲ. ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿರುವ ಕಾರಣ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ.

ಜಿಲ್ಲೆಯ 2546 ಅಂಗನವಾಡಿ ಕೇಂದ್ರಗಳು, 9 ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಹಾಗೂ ಖಾಸಗಿ ಶಾಲೆಗಳ ಎಲ್‌ಕೆಜಿ, ಯುಕೆಜಿ ತರಗತಿಗಳು ಕಾರ್ಯ ನಿರ್ವಹಿಸಲಿವೆ.

ಈಗಾಗಲೇ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಇಲಾಖೆಯಿಂದ ಕೊರೊನಾ ಪರೀಕ್ಷೆ ಮಾಡಿಸಲಾಗಿದ್ದು, ಈ ವೇಳೆ ಯಾವುದೇ ಸೋಂಕು ಇಲ್ಲದಿರುವುದು ದೃಢಪಟ್ಟಿದೆ. ಮೂರು ದಿನದಿಂದ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಲಾಗಿದೆ. ತಮ್ಮ ವ್ಯಾಪ್ತಿಗೆ ಒಳಪಡುವ ಅಂಗನವಾಡಿ ಕೇಂದ್ರಗಳನ್ನು ಗುರುತಿಸಿ ಸಾನಿಟೈಸ್‌ ಮಾಡಲು ನಗರಸಭೆ, ಪುರಸಭೆ ಹಾಗೂ ಗ್ರಾಮ ಪಂಚಾಯಿತಿಗೆ ಸೂಚಿಸಲಾಗಿದೆ.

Latest Indian news

Popular Stories