ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್ ಫೋನ್, ಸ್ಕೂಟಿ: ಪ್ರಿಯಾಂಕಾ ಗಾಂಧಿ

ಲಖನೌ: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇಕಡ 40 ರಷ್ಟು ಟಿಕೆಟ್ ನೀಡುವ ಭರವಸೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ತನ್ನ ಪ್ರಚಾರ ಕಾರ್ಯಕ್ರಮ ಆರಂಭಿಸಿದಂತೆ ಕಾಣುತ್ತಿದ್ದು, ಈ ಹಿಂದೆ ಚುನಾವಣೆಯಲ್ಲಿ ಮಹಿಳೆಯರಿಗೆ ಶೇಕಡ 40 ರಷ್ಟು ಟಿಕೆಟ್ ನೀಡುವ ಭರವಸೆ ನೀಡಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪದವಿಪೂರ್ವ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್ ಫೋನ್, ಪದವಿ ವಿದ್ಯಾರ್ಥಿನಿಯರಿಗೆ ಸ್ಕೂಟಿ ನೀಡುವ ಭರವಸೆ ನೀಡಿದ್ದಾರೆ.

ತನ್ನ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಿದರೆ 12 ನೇ ತರಗತಿಯ ಎಲ್ಲಾ ಬಾಲಕಿಯರಿಗೆ ಸ್ಮಾರ್ಟ್‌ಫೋನ್ ನೀಡಲಾಗುವುದು ಹಾಗೂ ಎಲ್ಲಾ ಪದವೀಧರ ಹುಡುಗಿಯರಿಗೆ ಎಲೆಕ್ಟ್ರಾನಿಕ್ ಸ್ಕೂಟಿಯನ್ನು ನೀಡಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಅವರು, ‘ನಿನ್ನೆ ನಾನು ಕೆಲವು ವಿದ್ಯಾರ್ಥಿನಿಯರನ್ನು ಭೇಟಿಯಾದೆ. ಅವರು ತಮ್ಮ ಅಧ್ಯಯನಕ್ಕೆ ಮತ್ತು ಅವರ ಭದ್ರತೆಗೆ ಸ್ಮಾರ್ಟ್ ಫೋನ್ ಬೇಕು ಎಂದು ಹೇಳಿದರು. ಇಂದು ಉತ್ತರಪ್ರದೇಶ ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯ ಒಪ್ಪಿಗೆಯೊಂದಿಗೆ ಅಧಿಕಾರಕ್ಕೆ ಬಂದ ಮೇಲೆ ಇಂಟರ್ ಪಾಸ್ ಹುಡುಗಿಯರಿಗೆ ಸ್ಮಾರ್ಟ್ ಫೋನ್ ಗಳನ್ನು ಹಾಗೂ ಪದವೀಧರ ಹುಡುಗಿಯರಿಗೆ ಎಲೆಕ್ಟ್ರಾನಿಕ್ ಸ್ಕೂಟಿಗಳು ನೀಡಲು ನಿರ್ಧರಿಸಿದ್ದೇವೆ. ಇದು ನಿಜಕ್ಕೂ ನನಗೆ ಸಂತೋಷ ನೀಡಿದೆ ಎಂದು ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

Latest Indian news

Popular Stories