ಹುಬ್ಬಳ್ಳಿಯಲ್ಲಿ ಕೆಎಫ್ ಸಿಗೆ ಕರವೇ ದಿಗ್ಬಂಧನ

ಕೆಎಫ್ ಸಿ ವಿರುದ್ಧ‌ ಮುಂದುವರೆದ ಪ್ರತಿಭಟನೆ

ಕೆಎಫ್ ಸಿ ಸಂಸ್ಥೆ ಕನ್ನಡ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಕನ್ನಡಿಗರು ನಡೆಸುತ್ತಿರುವ ಅಭಿಯಾನ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು ಇಂದು ಹುಬ್ಬಳ್ಳಿಯ ಕೆಎಫ್ ಸಿ ಮಳಿಗೆಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ದಿಗ್ಬಂಧನ ಹೂಡಿದರು.

ಕರವೇ ರಾಜ್ಯ ಕಾರ್ಯದರ್ಶಿ ಹನುಮಂತ ಅಬ್ಬಿಗೇರಿ, ಧಾರವಾಡ ಜಿಲ್ಲಾಧ್ಯಕ್ಷ ರುದ್ರೇಶ್ ಹಳವದ ಅವರ ನೇತೃತ್ವದಲ್ಲಿ ಇಂದು ಕರವೇ ಪದಾಧಿಕಾರಿಗಳು ಕೆಎಫ್ ಸಿ ಮಳಿಗೆಗೆ ಮುತ್ತಿಗೆ ಹಾಕಿ, ಅಲ್ಲಿನ ಸಿಬ್ಬಂದಿಗೆ ಕನ್ನಡದ ಪಾಠ ಹೇಳಿದರು.

ಕೆಎಫ್ ಸಿ ಮಳಿಗೆಗಳಲ್ಲಿ ಸಂಪೂರ್ಣ ಕನ್ನಡವನ್ನೇ ಬಳಸಬೇಕು, ಕನ್ನಡದಲ್ಲೇ ವ್ಯವಹರಿಸಬೇಕು, ಎಲ್ಲ ನಾಮಫಲಕಗಳೂ ಕನ್ನಡದಲ್ಲಿ ಇರಬೇಕು, ಕನ್ನಡದ ಹಾಡುಗಳನ್ನು ಹಾಕಬೇಕು. ಇದಕ್ಕಾಗಿ ಒಂದು ವಾರದ ಗಡುವು ನೀಡುತ್ತಿದ್ದೇವೆ ಎಂದು ಕರವೇ ರಾಜ್ಯ ಕಾರ್ಯದರ್ಶಿ ಹನುಮಂತ ಅಬ್ಬಿಗೇರಿ ಎಚ್ಚರಿಕೆ ನೀಡಿದರು.

ರಾಜ್ಯೋತ್ಸವಕ್ಕೆ ಮುನ್ನ ಕೆಎಫ್ ಸಿ ಕನ್ನಡೀಕರಣವಾಗಬೇಕು. ಬೆಂಗಳೂರಿನ ಇಂದಿರಾನಗರ ಕೆಎಫ್ ಸಿ ಮಾಲ್ ನಲ್ಲಿ ಕನ್ನಡಿಗರ ವಿರುದ್ಧ ಮಾತಾಡಿದ್ದಕ್ಕೆ ಸಂಸ್ಥೆ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಕರವೇ ಉಗ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ. ಆಗ ಆಗುವ ಅನಾಹುತಗಳಿಗೆ ಕೆಎಫ್ ಸಿಯೇ ಹೊಣೆ ಹೊರಬೇಕಾಗುತ್ತದೆ ಎಂದು ಕರವೇ ಧಾರವಾಡ ಜಿಲ್ಲಾಧ್ಯಕ್ಷ ರುದ್ರೇಶ ಹಳವದ ಎಚ್ಚರಿಕೆ ನೀಡಿದರು.

ಕನ್ನಡವನ್ನು ಅಪಮಾನಿಸಿದ ಕೆಎಫ್ ಸಿ ವಿರುದ್ಧ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು ಭಾನುವಾರ #RejectKFC #KFCಕನ್ನಡಬೇಕು ಎಂಬ ಹ್ಯಾಶ್ ಟ್ಯಾಗ್ ಗಳು ರಾಷ್ಟ್ರಮಟ್ಟದಲ್ಲಿ ಟ್ರೆಂಡ್ ಆಗಿದ್ದವು. ನಿನ್ನೆ ದಾವಣಗೆರೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡರ ನೇತೃತ್ವದಲ್ಲಿ ಕೆಎಫ್ ಸಿ ಮುಂಭಾಗ ಪ್ರತಿಭಟನೆ ನಡೆದಿತ್ತು.

ಇಂದು ಕರವೇ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಹುಬ್ಬಳ್ಳಿ ಗೋಕುಲ ರೋಡ್ ಕೆ.ಎಫ್.ಸಿ ಮಳಿಗೆ ಮುಂದೆ ನಡೆದ ಪ್ರತಿಭಟನೆಯಲ್ಲಿ ಕರವೇ ರಾಜ್ಯ ಸಂಚಾಲಕರಾದ
ಹನುಮಂತಪ್ಪ ಮೇಟಿ, ಕರವೇ ರಾಜ್ಯ ಪದವೀಧರ ಘಟಕದ ಕಾರ್ಯದರ್ಶಿ ಪ್ರಭುಗೌಡ ಸಖ್ಯಾಗೌಡಶಾನಿ, ಯುವ ಘಟಕ ಜಿಲ್ಲಾ ಧ್ಯಕ್ಷರಾದ ಸಾಗರ್ ಗಾಯಕವಾಡ, ರೈತ ಘಟಕ ಜಿಲ್ಲಾಧ್ಯಕ್ಷರಾದ ಪಾಪು ಧಾರೆ, ಹುಬ್ಬಳ್ಳಿ ತಾಲೂಕು ಅಧ್ಯಕ್ಷರಾದ ಗುರಪ್ಪ ಹಳ್ಯಾಳ, ಹುಬ್ಬಳ್ಳಿ ತಾಲೂಕ ಯುವ ಘಟಕ ಅಧ್ಯಕ್ಷರಾದ ಗಂಗು ಪಾಟೀಲ್, ಧಾರವಾಡ ನಗರ ಘಟಕ ಅಧ್ಯಕ್ಷರಾದ ಮಲಿಕರೀಯಾಜ ಕಂಬಾರಗಣವಿ, ಧಾರವಾಡ ತಾಲ್ಲೂಕ ಉಪಾಧ್ಯಕ್ಷರಾದ ಕಲ್ಮೇಶ ಸಾಲಿ ಇನ್ನಿತರರು ಪಾಲ್ಗೊಂಡರು.

Latest Indian news

Popular Stories