ಆರ್.ಎಸ್.ಎಸ್ ಮೆರವಣಿಗೆಗೆ ಸುಪ್ರೀಂಕೋರ್ಟ್ ಹಸಿರು ನಿಶಾನೆ; ತಮಿಳುನಾಡು DMK ಸರ್ಕಾರಕ್ಕೆ ಮುಖಭಂಗ

ನವದೆಹಲಿ: ತಮಿಳುನಾಡಿನಾದ್ಯಂತ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮೆರವಣಿಗೆ ನಡೆಸಲು ಅನುಮತಿ ನೀಡಿರುವ ಮದ್ರಾಸ್ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಮಂಗಳವಾರ (ಎ.11) ಎತ್ತಿಹಿಡಿದಿದ್ದು, ಆರ್ ಎಸ್ ಎಸ್ (RSS) ಮೆರವಣಿಗೆಗೆ ಅವಕಾಶ ನೀಡಬಾರದು ಎಂಬ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರದ ಮನವಿಯನ್ನು ತಿರಸ್ಕರಿಸಿದೆ.

ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೆರವಣಿಗೆಗೆ ಅನುಮತಿ ನೀಡಿರುವ ಮದ್ರಾಸ್ ಹೈಕೋರ್ಟ್ ನ ಆದೇಶವನ್ನು ಪ್ರಶ್ನಿಸಿ ತಮಿಳುನಾಡಿನ ಡಿಎಂಕೆ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ತಮಿಳುನಾಡಿನಲ್ಲಿರುವ ವಲಸಿಗ(ಹಿಂದಿ ಭಾಷಿಕರು) ಕಾರ್ಮಿಕರಲ್ಲಿ ಭೀತಿಯನ್ನು ಉಂಟು ಮಾಡಿದೆ ಎಂಬ ವದಂತಿಯನ್ನು ಉಲ್ಲೇಖಿಸಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಆದರೆ ತಮಿಳುನಾಡು ಸರ್ಕಾರದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿ, ಮದ್ರಾಸ್ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿಯುವ ಮೂಲಕ ಆರ್ ಎಸ್ ಎಸ್ ಮೆರವಣಿಗೆಗೆ ಅವಕಾಶ ನೀಡಿದೆ.

ಕಳೆದ ವರ್ಷ ಅಕ್ಟೋಬರ್ ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಆಜಾದಿ ಕಾ ಅಮೃತ್ ಮಹೋತ್ಸವ ಮತ್ತು ಗಾಂಧಿ ಜಯಂತಿಯಂದು ಮೆರವಣಿಗೆ ನಡೆಸಲು ತಮಿಳುನಾಡು ಸರ್ಕಾರ ಅನುಮತಿ ನೀಡಬೇಕೆಂದು ಮನವಿ ಸಲ್ಲಿಸಿತ್ತು. ಈ ಸಂದರ್ಭದಲ್ಲಿ ಆರ್ ಎಸ್ ಎಸ್ ಮೆರವಣಿಗೆಗೆ ಅನುಮತಿ ನೀಡಲು ತಮಿಳುನಾಡು ಸರ್ಕಾರ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ RSS ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು.

Latest Indian news

Popular Stories