ಉ.ಪ್ರ: ಮತ್ತೋರ್ವ ಶಾಸಕ ಬಿಜೆಪಿ ಬಿಟ್ಟು ಸಮಾಜವಾದಿ ಪಕ್ಷ ಸೇರ್ಪಡೆ

ಲಖನೌ: ಉತ್ತರ ಪ್ರದೇಶದಲ್ಲಿ ಪಕ್ಷಾಂತರ ಪರ್ವ ಮುಂದುವರೆದಿದ್ದು, ಇಂದು ಮತ್ತೋರ್ವ ಬಿಜೆಪಿ ಶಾಸಕ ಪಕ್ಷಕ್ಕೆ ಗುಡ್ ಬೈ ಹೇಳಿ ಸಮಾಜವಾದಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಆಗ್ರಾದ ಫತೇಹಾಬಾದ್ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಶಾಸಕ ಜಿತೇಂದ್ರ ವರ್ಮಾ ಅವರು ಪಕ್ಷಕ್ಕೆ ರಾಜೀನಾಮೆ ನೀಡಿ ಸಮಾಜವಾದಿ ಪಕ್ಷಕ್ಕೆ ಸೇರಿದ್ದಾರೆ.

ಮೊದಲ ಹಂತದ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ವರ್ಮಾ ಹೆಸರು ಇರಲಿಲ್ಲ. ಅವರ ಸ್ಥಾನಕ್ಕೆ ಛೋಟೇಲಾಲ್ ವರ್ಮಾರಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ಆಕ್ರೋಶಗೊಂಡ ಜಿತೇಂದ್ರ ವರ್ಮಾ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.

ಉತ್ತರ ಪ್ರದೇಶ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಅವರಿಗೆ ಕಳುಹಿಸಿರುವ ಎರಡು ಸಾಲಿನ ರಾಜೀನಾಮೆ ಪತ್ರದಲ್ಲಿ ವರ್ಮಾ, “ನಾನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ದಯವಿಟ್ಟು ಅದನ್ನು ಸ್ವೀಕರಿಸಿ” ಎಂದು ಬರೆದಿದ್ದಾರೆ.

ರಾಜಿನಾಮೆ ಬಳಿಕ ಮಾತನಾಡಿದ ಅವರು, ‘ನಾನು ಬಿಜೆಪಿ ತೊರೆದಿದ್ದಕ್ಕೆ ಹಲವು ಕಾರಣಗಳಿವೆ, ಟಿಕೆಟ್ ನಿರಾಕರಿಸಿ 15 ದಿನಗಳಾದರೂ ಪಕ್ಷದ ನಾಯಕತ್ವ ನನ್ನೊಂದಿಗೆ ಮಾತನಾಡಿಲ್ಲ, ಹೀಗಾಗಿ ಇದರಿಂದ ನೊಂದು ನಾನು ಸಮಾಜವಾದಿ ಪಕ್ಷಕ್ಕೆ ಸೇರಿದ್ದೇನೆ ಮತ್ತು ನಾನು ಈ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. “
ಬಿಜೆಪಿ ಕಾರ್ಯಕರ್ತರು ಮತ್ತು ಶಾಸಕರಿಗೆ ಪಕ್ಷದಲ್ಲಿ ಯಾವುದೇ ಹೇಳಿಕೆ ಇಲ್ಲ ಎಂದು ಅವರು ಕಿಡಿಕಾರಿದರು.

ರೈತನಿಗೆ ರಸಗೊಬ್ಬರ ಕೊಡಲು ಸಾಧ್ಯವಾಗದೇ ಇದ್ದರೆ ನೀವು ಶಾಸಕರಾಗಿದ್ದು ಪ್ರಯೋಜನವೇನು.? ನಾನಷ್ಟೇ ಅಲ್ಲ ಬಿಜೆಪಿಯ ಹಲವು ಶಾಸಕರ ಪರಿಸ್ಥಿತಿ ಇದೆ.. ಹಲವಾರು ಶಾಸಕರು ಬಿಜೆಪಿ ತೊರೆಯಲಿದ್ದಾರೆ ಎಂದರು.

Latest Indian news

Popular Stories