ಐಪಿಎಲ್ 2022: ಚೊಚ್ಚಲ ಆವೃತ್ತಿಯಲ್ಲೇ ಗುಜರಾತ್ ಟೈಟನ್ಸ್ ಗೆ ಚಾಂಪಿಯನ್ ಪಟ್ಟ

ಅಹಮದಾಬಾದ್: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2022ರ ಫೈನಲ್ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದ ವಿರುದ್ಧ ಗುಜರಾತ್ ಟೈಟನ್ಸ್ ಏಳು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟಕ್ಕೇರಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜಸ್ತಾನ ರಾಯಲ್ಸ್ ತಂಡಕ್ಕೆ ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಸಿಂಹಸ್ವಪ್ನರಾಗಿ ಕಾಡಿದರು. ಪಾಂಡ್ಯ 3 ವಿಕೆಟ್ ಪಡೆಯುವ ಮೂಲಕ ರಾಯಲ್ಸ್ ಗೆ ಮರ್ಮಾಘಾತ ನೀಡಿದರು.

ರಾಜಸ್ತಾನ ರಾಯಲ್ಸ್ ತಂಡ ನಿಗದಿತ 20 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿ, ಗುಜರಾತ್ ಟೈಟನ್ಸ್ ಗೆಲುವಿಗೆ 131 ರನ್ ಗಳ ಅಲ್ಪಮೊತ್ತದ ಗುರಿ ನೀಡಿತ್ತು.

131 ರನ್‌ಗಳ ಸುಲಭದ ಗುರಿ ಬೆನ್ನತ್ತಿದ್ದ ಹಾರ್ದಿಕ್ ಪಾಂಡ್ಯ ಸಾರಥ್ಯದ ಗುಜರಾತ್‌ ಟೈಟನ್ಸ್‌ ತಂಡ ಆರಂಭದಲ್ಲಿ ಒಂದೆರಡು ವಿಕೆಟ್‌ಗಳನ್ನು ಕಳೆದುಕೊಂಡರೂ ಒತ್ತಡಕ್ಕೆ ಸಿಲುಕದೆ ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶನ ನೀಡಿ 18.1 ಓವರ್‌ಗಳಲ್ಲಿ 133/3 ರನ್‌ ಸಿಡಿಸಿ ಗೆಲುವು ಸಾಧಿಸಿತು.

ಇನ್ನು ಬ್ಯಾಟಿಂಗ್‌ ವೈಫಲ್ಯಕ್ಕೆ ಭಾರಿ ಬೆಲೆತೆತ್ತ ರಾಜಸ್ಥಾನ್‌ ರಾಯಲ್ಸ್‌ ತಂಡ 14 ವರ್ಷಗಳ ಬಳಿಕ ಮೊದಲ ಬಾರಿ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ ಫೈನಲ್‌ ತಲುಪಿ ಟ್ರೋಫಿ ಗೆಲ್ಲಲು ವಿಫಲವಾಯಿತು.

ಓಪನರ್‌ ಶುಭಮನ್‌ ಗಿಲ್‌ ಕೊನೆಯ ವರೆಗೂ ಬ್ಯಾಟ್‌ ಮಾಡಿ 43 ಎಸೆತಗಳಲ್ಲಿ ಅಜೇಯ 45 ರನ್‌ಗಳ ಕೊಡುಗೆ ಕೊಟ್ಟರು. ಕ್ಯಾಪ್ಟನ್‌ ಹಾರ್ದಿಕ್‌ ಪಾಂಡ್ಯ 30 ಎಸೆತಗಳಲ್ಲಿ 34 ರನ್‌ ಬಾರಿಸಿದರೆ, ಸ್ಲಾಗ್‌ ಓವರ್‌ಗಳಲ್ಲಿ ಬ್ಯಾಟ್‌ ಮಾಡಲು ಬಂದ ಡೇವಿಡ್‌ ಮಿಲ್ಲರ್‌ 19 ಎಸೆತಗಳಲ್ಲಿ ಅಜೇಯ 32 ರನ್ ಸಿಡಿಸಿ ತಂಡವನ್ನು ಸುಲಭವಾಗಿ ಜಯದ ದಡ ಮುಟ್ಟಿಸಿದರು.

Latest Indian news

Popular Stories