ಟಿ-20 ಕ್ರಿಕೆಟ್ ವಿಶ್ವಕಪ್: ಭಾರತ ತಂಡಕ್ಕೆ ನ್ಯೂಝಿಲೆಂಡ್ ಎದುರು ಸೋಲು

ದುಬೈ: ಟಾಸ್ ಗೆದ್ದು ಫಿಲ್ಡಿಂಗ್ ಆಯ್ದುಕೊಂಡ ನ್ಯೂಝಿಲೆಂಡ್ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ದಾಳಿ ಸಂಘಟಿಸಿತು. ಭಾರತವನ್ನು 110 ರನ್’ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು.

ಭಾರತದ ಆರಂಭಿಕ ಆಟಗಾರರು ಇಂದು ಸಂಪೂರ್ಣ ವೈಫಲ್ಯವಾದ ಕಾರಣ ಭಾರತ ದೊಡ್ಡ ಮೊತ್ತ ಕಲೆ ಹಾಕುವಲ್ಲಿ ವಿಫಲವಾಯಿತು. ಕಿಶನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತೊಮ್ಮೆ ಬ್ಯಾಟಿಂಗ್ ನಲ್ಲಿ ವಿಫಲ ಪ್ರದರ್ಶನ ನೀಡಿದರು.

26 ರನ್ ಗಳಿಸಿದ ಜಡೇಜಾ‌ ಮಾತ್ರ ಅತೀ ಹೆಚ್ಚು ರನ್ ಗಳಿಸಿದ ಸ್ಕೋರರ್ ಆಗಿ ಮೂಡಿ ಬಂದರು. ಶಿಸ್ತು ಬದ್ಧ ಬೌಲಿಂಗ್ ಸಂಘಟಿಸಿದ ನ್ಯೂಝಿಲೆಂಡ್ ಬೌಲರ್ ಗಳು ಭಾರತವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ನ್ಯೂಝಿಲೆಂಡ್ ಪರ ಬೌಲ್ಟ್ ಮೂರು ವಿಕೆಟ್ ತನ್ನದಾಗಿಸಿಕೊಂಡರೆ ಸೋದಿ 2 ವಿಕೆಟ್ ಪಡೆದರು.

110 ರನ್ ಗುರಿ ಬೆನ್ನಟ್ಟಿದ ನ್ಯೂಝಿಲೆಂಡ್’ಗೆ ಆರಂಭಿಕ ಆಟಗಾರರಾದ ಮಿಚೆಲ್ ಮತ್ತು ಗುಪ್ಟಿಲ್ ಭದ್ರ ಬುನಾದಿ ಹಾಕಿ ಕೊಟ್ಟರು. ನಂತರ ಮಿಚೆಲ್ (49) ಸ್ಪೋಟಕ ಬ್ಯಾಟಿಂಗ್ ಮಾಡಿ ಸುಲಭವಾಗಿ ಗುರಿ ತಲುಪಿದರು. ಈ ಮೂಲಕ ಭಾರತ ವಿಶ್ವಕಪ್ ಟೂರ್ನಿಯಲ್ಲಿ ಎರಡನೇ ಸೋಲನ್ನು ಅನುಭವಿಸಿತು. ಈ ಮುನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ಸೋತಿತ್ತು. ಇದೀಗ ಅಂತಿಮವಾಗಿ ಅಫಘಾನಿಸ್ತಾನ ತಂಡದ ಎದುರು ಗೆಲುವು ಸಾಧಿಸದಿದ್ದರೆ ಟೂರ್ನಿಯಿಂದ ಹೊರ ಬೀಳುವ ಸಾಧ್ಯತೆ ಹೆಚ್ಚಾಗಿದೆ.

ವಿರಾಟ್ ಪಡೆಯ ಕಳಪೆ ನಿರ್ವಹಣೆಗಾಗಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

Latest Indian news

Popular Stories