ಪ್ರಧಾನಿ ಮೋದಿಯ ”ಮುಜ್ರಾ’ ಹೇಳಿಕೆ: ಬಿಹಾರಕ್ಕೆ ಮಾಡಿದ ಅವಮಾನ: ಖರ್ಗೆ ವಾಗ್ದಾಳಿ

ಸಸಾರಾಮ್: ವಿರೋಧ ಪಕ್ಷಗಳ ನಾಯಕರ ವಿರುದ್ಧ ‘ಮುಜ್ರಾ’ ಹೇಳಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ಹೇಳಿಕೆ ನೀಡುವ ಮೂಲಕ ಬಿಹಾರವನ್ನು ಅವಮಾನಿಸಿದ್ದಾರೆ ಎಂದು ಹೇಳಿದರು.

ಶುಕ್ರವಾರ ಬಿಹಾರದಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಇಂಡಿಯಾ ಕೂಟವು ಮುಸ್ಲಿಂ ಮತ ಬ್ಯಾಂಕ್ ಅಡಿಯಾಳಾಗಿದ್ದು, ಅದರ ಮುಂದೆ ‘ಮುಜ್ರಾ’ (ನೃತ್ಯ) ಮಾಡುತ್ತಿದೆ ಎಂದು ಟೀಕಿಸಿದ್ದರು. ಇಂದು ಸಸಾರಂ ಲೋಕಸಭಾ ಕ್ಷೇತ್ರದ ಮಹಾಘಟಬಂಧನ್ ಅಭ್ಯರ್ಥಿ ಮನೋಜ್ ಕುಮಾರ್ ಪರ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ವಿರೋಧ ಪಕ್ಷದ ನಾಯಕರಿಗೆ ಪ್ರಧಾನಿ ಮೋದಿಯವರು ಬಳಸಿದ ಪದ, ಬಿಹಾರ ಮತ್ತು ಅದರ ಮತದಾರರಿಗೆ ಮಾಡಿದ ಅವಮಾನ ಎಂದರು.

“ಪ್ರಧಾನಿ ಮೋದಿ ತನನ್ನು ‘ತೀಶಮಾರ್ಖನ್ ಎಂದು ಪರಿಗಣಿಸಿದ್ದಾರೆ. ಅವರು ತಪ್ಪು ಅಭಿಪ್ರಾಯದಲ್ಲಿದ್ದಾರೆ. ಜನರು ನಿಜವಾದ ‘ತೀಶಮಾರ್ಖನ್. ಸರ್ವಾಧಿಕಾರಿಯಾಗಿರುವ ಅವರು, ಮೂರನೇ ಅವಧಿಗೆ ಪ್ರಧಾನಿಯಾದರೆ, ಜನರು ಏನನ್ನೂ ಹೇಳಲು ಬಿಡುವುದಿಲ್ಲ ಅಷ್ಟೇ ಎಂದರು. ಈ ಚುನಾವಣೆ ರಾಹುಲ್ ವರ್ಸಸ್ ಮೋದಿ ಅಲ್ಲ, ಜನರು ವರ್ಸಸ್ ಮೋದಿ ಚುನಾವಣೆಯಾಗಿದೆ. ಪ್ರಧಾನಿಯಾಗಿ ನರೇಂದ್ರ ಮೋದಿ ಅವರನ್ನು ಗೌರವಿಸುತ್ತೇನೆ. ಆದರೆ, ಮೋದಿ ಕಾಂಗ್ರೆಸ್ ನಾಯಕರನ್ನು ಗೌರವಿಸುವುದಿಲ್ಲ. ಅವರು ಶ್ರೀಮಂತರನ್ನು ಮಾತ್ರ ತಬ್ಬಿಕೊಳ್ಳುತ್ತಾರೆಯೇ ಹೊರತು ಬಡವರನ್ನಲ್ಲ ಎಂದು ಖರ್ಗೆ ಆರೋಪಿಸಿದ್ದಾರೆ.

ಜೂನ್ 1 ರಂದು ಸಸಾರಾಮ್, ನಳಂದಾ, ಪಾಟ್ನಾ ಸಾಹಿಬ್, ಪಾಟಲಿಪುತ್ರ, ಅರ್ರಾ, ಬಕ್ಸರ್, ಕರಕಟ್ ಮತ್ತು ಜೆಹಾನಾಬಾದ್ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

Latest Indian news

Popular Stories