ಬೆಳ್ತಂಗಡಿ: ಸಾವಿರಾರು ಹೆಕ್ಟೇರ್ ಅರಣ್ಯ ಬೆಂಕಿಗಾಹುತಿ

ಬೆಳ್ತಂಗಡಿ, ಮಾ.10: ತಾಲೂಕಿನ ಶಿಶಿಲ ಮತ್ತು ಶಿಬಾಜೆ ಪ್ರದೇಶದಲ್ಲಿ ವಿಪರೀತ ಬಿಸಿಲು ಮತ್ತು ಕಾಡ್ಗಿಚ್ಚಿಗೆ ಸುಮಾರು 4800 ಹೆಕ್ಟೇರ್ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ.

ಉಪ್ಪಿನಂಗಡಿ ಅರಣ್ಯ ಇಲಾಖೆಯ ಸುಮಾರು 50 ಸಿಬ್ಬಂದಿಗಳೊಂದಿಗೆ ಸ್ಥಳೀಯರು ಒಂದು ವಾರದಿಂದ ಬೆಂಕಿಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿದ್ದಾರೆ.

ಶಿಶಿಲದ ಮಿಯಾರು ಅರಣ್ಯ, ಶಿಬಾಜೆಯ ಶಿರಾಡಿ ಮೀಸಲು ಅರಣ್ಯದಿಂದ ಚಿಕ್ಕಮಗಳೂರಿನ ಬಾಳೂರುವರೆಗೆ ಹಬ್ಬಿರುವ ಬೆಂಕಿ ಇಡೀ ಗುಡ್ಡಗಾಡು ಅರಣ್ಯ ಪ್ರದೇಶಕ್ಕೆ ರಾತ್ರಿ ಹೊತ್ತಿ ಉರಿದಂತಿದೆ. ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿರುವ ಅವಿನಾಶ್ ಭಿಡೆ ಅವರು ಹಾನಿಯ ವಿವರ ನೀಡಿದರು.

ಅಮೆಡಿಕಲ್ಲು, ಸಿಂಗಾಣಿ ಬೆಟ್ಟ ಹಾಗೂ ಉದಯ ಬೆಟ್ಟವನ್ನು ಸಂಪೂರ್ಣ ಆವರಿಸಿಕೊಂಡಿದೆ. ಹತ್ಯಡ್ಕ ಗ್ರಾಮದ ಪೆರಡೇಲು ಎಂಬಲ್ಲಿ ಗುರುವಾರ ದಟ್ಟ ಹೊಗೆ ಆವರಿಸಿದೆ. ಬೆಳ್ತಂಗಡಿ ತಾಲೂಕಿನ ದಿಡುಪೆಯ ಮಲ್ಲ ಪ್ರದೇಶದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿರುವುದನ್ನು ಪ್ರತ್ಯಕ್ಷದರ್ಶಿಗಳು ಖಚಿತಪಡಿಸಿದ್ದಾರೆ. ಚಾರ್ಮಾಡಿ-ಕನಪಾಡಿ ಮೀಸಲು ಅರಣ್ಯದ ಪಟ್ಲ, ಕಾಟಾಜೆಯಲ್ಲೂ ಬೆಂಕಿ ಕಾಣಿಸಿಕೊಂಡಿದೆ. ಬಾಂಜಾರು ಮಲೆಯ ಕೆಲವು ಖಾಸಗಿ ಪ್ರದೇಶಗಳು ಮತ್ತು ಇತರ ಸ್ಥಳಗಳಲ್ಲಿ ಬೆಂಕಿಯ ಘಟನೆಗಳು ವರದಿಯಾಗಿವೆ. ಬುಧವಾರ ನಿನ್ನಿಗಲ್ಲು ಎಂಬಲ್ಲಿ ರಸ್ತೆ ಬದಿಯ ಒಣ ಹುಲ್ಲಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು.

ಕಾಡಾನೆಗಳನ್ನು ಓಡಿಸುವ ಸಲುವಾಗಿ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರಬಹುದು ಎಂದು ಶಂಕಿಸಲಾಗಿದೆ. ಶಿಬಾಜೆ ಗ್ರಾಮದ ಬಂಡಿಹೊಳೆ ಎಂಬಲ್ಲಿ ಬುಧವಾರ ಅಪಾರ ಪ್ರಮಾಣದ ಅರಣ್ಯ ಸುಟ್ಟು ಕರಕಲಾಗಿದೆ. ಸ್ಥಳೀಯ ನಿವಾಸಿ ವಿಶ್ವನಾಥ ಶೆಂಡ್ಯೆ ನೀಡಿದ ಮಾಹಿತಿಯಂತೆ ಪೆರ್ಲ ಮೊಬೈಲ್ ಟವರ್‌ಗೆ ಬೆಂಕಿ ತಗುಲಿದ್ದು, ಭಾರೀ ಅನಾಹುತ ತಪ್ಪಿದೆ.

Latest Indian news

Popular Stories