ಮಂಗಳೂರು: ಕೋಳಿ ಮಾರಾಟ ಅಂಗಡಿಯ ಸಿಬ್ಬಂದಿಯ ಮೇಲೆ ಮಾರಣಾಂತಿಕ ಹಲ್ಲೆ: ಇಬ್ಬರು ರೌಡಿ ಶೀಟರ್’ಗಳ ಬಂಧನ

ಮಂಗಳೂರು: ನಗರದ ವೆಲೆನ್ಶಿಯಾ ಜಂಕ್ಷನ್ ನಲ್ಲಿ ಕೋಳಿ ಮಾಂಸ ಮಾರಾಟದ ಅಂಗಡಿಯ ಸಿಬ್ಬಂದಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದಡಿ ಇಬ್ಬರು ರೌಡಿಶೀಟರ್ ಗಳನ್ನು ಮಂಗಳೂರು ದಕ್ಷಿಣ ಪೊಲೀಸರು ರವಿವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ರೌಡಿ ಶೀಟರ್ ಗಳಾದ ಮಂಗಳೂರು ಜಲ್ಲಿಗುಡ್ಡೆ ಬಜಾಲ್ ನಿವಾಸಿ ಪ್ರೀತಮ್ ಪೂಜಾರಿ (27 ವ) ಮತ್ತು ಎಕ್ಕೂರು ನಿವಾಸಿ ಧೀರು ಯಾನೆ ಧೀರಜ್ ಕುಮಾರ್ ( 25 ವ) ಎಂದು ಗುರುತಿಸಲಾಗಿದೆ.

ಏ.10ರಂದು ಸಂಜೆ 6.30ರ ಸಮಯಕ್ಕೆ ಮಂಗಳೂರು ವೆಲೆನ್ಶಿಯಾ ಜಂಕ್ಷನ್ ಬಳಿಯ ಐಡಿಯಲ್ ಚಿಕನ್ ಅಂಗಡಿಯ ಮುಂಭಾಗದಲ್ಲಿ ಆರೋಪಿಗಳಿಬ್ಬರು ಸಾರ್ವಜನಿಕನೊಬ್ಬನಿಗೆ ಹಲ್ಲೆ ನಡೆಸುತ್ತಿದ್ದರು. ಇದನ್ನು ಅಂಗಡಿ ಸಿಬ್ಬಂದಿಗಳು ಪ್ರಶ್ನಿಸಿದಾಗ ಆರೋಪಿಗಳು ಅಂಗಡಿ ಸಿಬ್ಬಂದಿಗಳಾದ ಸುನಿಲ್ ಮಾರ್ಡಿ, ಅನಂತ ಮತ್ತು ಜೀವನ್ ಎಂಬವರಿಗೆ ಹೆಲ್ಮೆಟ್, ಕಲ್ಲುಗಳಿಂದ ಹೊಡೆದು ಗಾಯಗೊಳಿಸಿದ್ದಾರೆ. ನಂತರ ಸಿಬ್ಬಂದಿಗೆ ಚೂರಿಯಿಂದ ಇರಿಯಲು ಹೋದಾಗ ಸ್ಥಳದಲ್ಲಿದ್ದ ಸಾರ್ವಜನಿಕರು ತಡೆದಿದ್ದಾರೆ. ಆರೋಪಿಗಳು ಸಾರ್ವಜನಿಕರಿಗೂ ಚೂರಿ ತೋರಿಸಿ, ತಿವಿಯು ಪ್ರಯತ್ನಿಸಿದ್ದಾರೆ.

ಆರೋಪಿಗಳು ಸಾರ್ವಜನಿಕರೊಂದಿಗೆ ಜಗಳ ನಡೆಸಿ ಬಿದ್ದು ಗಾಯಗೊಂಡಿದ್ದಾರೆ. ಈ ಸಮಯದಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ಸಾರ್ವಜನಿಕರ ಸಹಕಾರದಿಂದ ಆರೋಪಿಗಳನ್ನು ಬಂಧಿಸಿದ್ದಾರೆ.

ಎರಡು ಚೂರಿಗಳೂ, ಕಲ್ಲು, ಹೆಲ್ಮೆಟ್ ಗಳನ್ನು ವಶಕ್ಕೆ ಪಡೆಯಲಾಗಿದೆ. ವೈದ್ಯಕೀಯ ತಪಾಸಣೆ ವೇಳೆಗೆ ಇಬ್ಬರೂ ಮದ್ಯಸೇವನೆ ಮಾಡಿರುವುದು ಮತ್ತು ಪ್ರೀತಮ್ ಗಾಂಜಾ ಸೇವನೆ ಮಾಡಿರುವುದು ಧೃಡಪಟ್ಟಿದೆ.

Latest Indian news

Popular Stories