ವಿಂಡೀಸ್ ವಿರುದ್ಧದ ಟಿ20 ಸರಣಿ: ಸ್ಟೇಡಿಯಂನಲ್ಲಿ ಶೇ.75 ಪ್ರೇಕ್ಷಕರಿಗೆ ಅನುಮತಿ

ಕೋಲ್ಕತ್ತಾ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿ ಫೆ.6ರಿಂದ ಆರಂಭವಾಗಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯ ಬಳಿಕ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಎಲ್ಲಾ ಮೂರು ಟಿ20 ಪಂದ್ಯಗಳು ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿದೆ.

ಕೋಲ್ಕತ್ತಾದಲ್ಲಿ ನಡೆಯಲಿರುವ ಟಿ20 ಸರಣಿಯ ವೇಳೆ ಕ್ರೀಡಾಂಗಣದ ಸಾಮರ್ಥ್ಯದ ಶೇ.75 ರಷ್ಟು ಪ್ರೇಕ್ಷಕರಿಗೆ ಪಂದ್ಯ ವೀಕ್ಷಿಸಲು ಅನುಮತಿ ನೀಡಲಾಗಿದೆ. ಪಶ್ಚಿಮ ಬಂಗಾಳ ಸರ್ಕಾರವು ತನ್ನ ಕೋವಿಡ್ ನಿಯಮಗಳನ್ನು ಸಡಿಲಿಕೆ ಮಾಡಿದ್ದು, ಒಳಾಂಗಣ ಅಥವಾ ಹೊರಾಂಗಣ ಕ್ರೀಡೆಗಳಿಗೆ ಶೇ.75ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಿದೆ.

ಈ ಅವಕಾಶಕ್ಕಾಗಿ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಬೆಂಗಾಲ್ ಕ್ರಿಕೆಟ್ ಅಕಾಡಮೆ ಅಧ್ಯಕ್ಷ ಅವಿಶೇಕ್ ದಾಲ್ಮಿಯಾ ಧನ್ಯವಾದ ಹೇಳಿದ್ದಾರೆ. ಕಳೆದ ವರ್ಷ ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲಾಗಿತ್ತು.

ಈ ಮೊದಲು ಮೂರು ಏಕದಿನ ಪಂದ್ಯಗಳು ಅಹಮದಾಬಾದ್, ಕೋಲ್ಕತ್ತಾ ಮತ್ತು ಜೈಪುರ್ ನಲ್ಲಿ, ಟಿ20 ಪಂದ್ಯಗಳು ಕಟಕ್, ವಿಶಾಖಪಟ್ಟಣ ಮತ್ತು ತಿರುವನಂತಪುರಂನಲ್ಲಿ ಆಯೋಜಿಸುವ ಯೋಜನೆ ಮಾಡಲಾಗಿತ್ತು. ಆದರೆ ಕೋವಿಡ್ ಕಾರಣದಿಂದ ಬಿಸಿಸಿಐ ಇದನ್ನು ಬದಲಾಯಿಸಿ, ಎಲ್ಲಾ ಏಕದಿನ ಪಂದ್ಯಗಳನ್ನು ಅಹಮದಾಬಾದ್ ಗೆ ಮತ್ತು ಟಿ20 ಪಂದ್ಯಗಳನ್ನು ಕೋಲ್ಕತ್ತಾಗೆ ಸ್ಥಳಾಂತರಿಸಿದೆ.

Latest Indian news

Popular Stories