ವಿಜಯಪುರ: ಹಿಜಾಬ್ ವಿವಾದದ ನಡುವೆ ಸಿಂಧೂರಕ್ಕೆ ಬ್ರೇಕ್ ಹಾಕಿದ ಉಪನ್ಯಾಸಕ

ವಿಜಯಪುರ: ಹಿಜಾಬ್ – ಕೇಸರಿ ಶಾಲು ವಿವಾದ ಜೀವಂತವಾಗಿರುವ ಮಧ್ಯೆಯೇ ಜಿಲ್ಲೆಯ ಇಂಡಿ ಪಟ್ಟಣದ ಕಾಲೇಜುಗಳಲ್ಲಿ ಈಗ ಸಿಂಧೂರ ವಿವಾದದ ಕುರಿತು ವರದಿಯಾಗಿದೆ.

ಇಂಡಿ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಣೆಗೆ ಕುಂಕುಮ ಹಚ್ಚಿಕೊಂಡು ಬಂದ ಓರ್ವ ವಿದ್ಯಾರ್ಥಿಗೆ ಕುಂಕುಮ ಅಳಿಸಿ ಕಾಲೇಜು ಪ್ರವೇಶಿಸುವಂತೆ ಉಪನ್ಯಾಸಕರು ತಾಕೀತು ಮಾಡಿದ್ದಾರೆ. ಇದಕ್ಕೆ ವಿದ್ಯಾರ್ಥಿ ಒಪ್ಪದಿದ್ದಾಗ ಕಾಲೇಜು ಪ್ರವೇಶ ನಿರಾಕರಿಸಲಾಗಿದೆ.

ಹಣೆಗೆ ಕುಂಕುಮ ಹಚ್ಚಿಕೊಂಡು ಬರುವುದು ಕೂಡ ಹಿಜಾಬ್ ವಿವಾದಕ್ಕೆ ಮತ್ತಷ್ಟು ಸಮಸ್ಯೆಗೆ ಕಾರಣ ಎಂದು ಸಿಂಧೂರ ಹಚ್ಚಿಕೊಂಡು ಬಂದ ವಿದ್ಯಾರ್ಥಿಗೆ ಕಾಲೇಜಿನ ದೈಹಿಕ ನಿರ್ದೇಶಕರು ಸಲಹೆ ನೀಡಿದಾಗ ವಿದ್ಯಾರ್ಥಿ ಹಾಗೂ ಉಪನ್ಯಾಸಕರ ಮಧ್ಯೆ ಚರ್ಚೆಗೆ ಕಾರಣವಾಗಿದೆ.

ಈ ವೇಳೆ ಕಾಲೇಜಿನ ದೈಹಿಕ ಉಪನ್ಯಾಸಕ ಸಂಗಮೇಶಗೌಡ ಹಾಗೂ ‌ಪದವಿ ವಿದ್ಯಾರ್ಥಿ ಗಂಗಾಧರ ಬಡಿಗೇರ ನಡುವೆ ಮಾತಿನ ಚಕಮಕಿ ನಡೆದಿದ್ದು, ಹಿಜಾಬ್ ಹಾಗೂ ಕೇಸರಿ ಶಾಲು ಹೊರತು ಪಡಿಸಿ ಹಣೆಗೆ ಕುಂಕುಮ‌, ನಾಮ ಹಾಕಿ ಬರಬೇಡಿ ಎಂದರೆ ಹೇಗೆ. ನಮ್ಮ ಪಾರಂಪರಿಕ ಸಾಂಸ್ಕೃತಿಕ ಸಂಕೇತವಾಗಿರುವ ಸಿಂಧೂರ ತಿಲಕಕ್ಕೆ ಯಾಕೆ ಅನುಮತಿ ಇಲ್ಲ ಎಂದು ವಿದ್ಯಾರ್ಥಿ‌ ಪಟ್ಟು ಹಿಡಿದಿದ್ದಾನೆ. ವಿಷಯ ತಿಳಿದ ಇತರೆ ಉಪನ್ಯಾಸಕರು, ಪೊಲೀಸರು ಸ್ಥಳಕ್ಕೆ ತೆರಳಿ ವಿದ್ಯಾರ್ಥಿಯ ಮನವೊಲಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ ಎಂದು ಉದಯವಾಣಿ ವರದಿ ಮಾಡಿದೆ.

Latest Indian news

Popular Stories