ಶಾಸಕರು ಅಲ್ಲ, ಎಂಎಲ್​ಸಿಯೂ ಅಲ್ಲ ಆದರೂ ಬೋಸರಾಜ್​ಗೆ ಸಚಿವ ಸ್ಥಾನ

ಬೆಂಗಳೂರು/ರಾಯಚೂರು: ಕಾಂಗ್ರೆಸ್​ 135 ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೇರಿದೆ. ಆದ್ರೆ, ಶಾಸಕರು ಅಲ್ಲ, ವಿಧಾನಪರಿಷತ್ತಿನ ಸದಸ್ಯರೂ ಅಲ್ಲ ಆದರೂ ಎನ್​ಎಸ್​ ಬೋಸರಾಜು(NS boseraju) ಅವರಿಗೆ ಸಚಿವ ಸ್ಥಾನ ಒಲಿದುಬಂದಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ. ಘಟಾನುಘಟಿ ಬಿಜೆಪಿ ನಾಯಕರ ವಿರುದ್ಧವೇ ಜನರಿಂದ ಆಯ್ಮೆಯಾಗಿ ವಿಧಾನಸಭೆಗೆ ಬಂದಿದ್ದೇವೆ ಆದರೂ. ಜನಪ್ರತಿನಿಧಿಯಲ್ಲದ ಬೋಸರಾಜ್​ಗೆ ಹೇಗೆ ಸಚಿವ ಸ್ಥಾನ ಸಿಕ್ತು ಎಂದು ಕಾಂಗ್ರೆಸ್​ ಪಡಸಾಲೆಯಲ್ಲಿ ಸಾಕಷ್ಟು ಚರ್ಚೆಗಳಿಗೆ ಗ್ರಾಸವಾಗಿದೆ. ಆದ್ರೆ, ಬೋಸರಾಜ್​ ಅವರಿಗೆ ಮಂತ್ರಿಭಾಗ್ಯ ದೊರೆತ್ತಿದ್ದೇ ಹೈಕಮಾಂಡ್​ನಿಂದ. ಅವರು ಕ್ಷೇತ್ರ ತ್ಯಾಗ ಮಾಡಿದ್ದರಿಂದ ಮಂತ್ರಿಗಿರಿ ಸಿಕ್ಕಿದೆ ಎಂದು ತಿಳಿದುಬಂದಿದೆ.

ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ರಾಯಚೂರು ನಗರ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರಿಂದ ಹೈಕಮಾಂಡ್​ನಿಂದಲೇ ಬೋಸರಾಜ್​ ಅವರಿಗೆ ಮಂತ್ರಿಭಾಗ್ಯ ಒಲಿದುಬಂದಿದೆ. ಹೌದು….ರಾಯಚೂರು ನಗರ ಕ್ಷೇತ್ರ ಟಿಕೆಟ್​ ಮುಸ್ಲಿಂ ಅಭ್ಯರ್ಥಿಗೆ ನೀಡಲು ನಿರ್ಧಾರವಾಗಿತ್ತು. ಆದ್ರೆ, ಬೋಸರಾಜ್ ಅವರು ರಾಯಚೂರು ನಗರ ಟಿಕೆಟ್​ ಆಕಾಂಕ್ಷಿಯಾಗಿದ್ದರು. ತಮಗೆ ಕೊಡಬೇಕು. ಇಲ್ಲ ತಮ್ಮ ಪುತ್ರ ರವಿ ಬೋಸರಾಜ್ ಅವರಿಗೆ ಈ ಬಾರಿ ಟಿಕೆಟ್​ ಕೊಡಲೇಬೇಕೆಂದು ಪಟ್ಟು ಹಿಡಿದಿದ್ದರು. ರಾಜ್ಯ ನಾಯಕರು ಎಷ್ಟೇ ಮನವೊಲಿಸುವ ಪ್ರಯತ್ನ ಪಟ್ಟಿದ್ದರಾದರೂ ಅವರು ಬಗ್ಗಿರಲಿಲ್ಲ. ಕೊನೆಗೆ ಹೈಕಮಾಡ್ ಮಧ್ಯೆ ಪ್ರವೇಶಿಸಿ ಬೋಸರಾಜ್ ಅವರ ಮನವೊಲಿಸಿತ್ತು. ಖುದ್ದು ರಾಹುಲ್ ಗಾಂಧೀ ಅವರೇ ಬೋಸರಾಜ್ ಜೊತೆ ಮಾತುಕತೆ ನಡೆಸಿ, ಸರ್ಕಾರ ಬಂದರೆ ಎಂಎಲ್​ಸಿ ಮಾಡಿ ಪ್ರಮುಖ ಹುದ್ದೆ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಇದೀಗ ಬೋಸರಾಜ್​ಗೆ ಅಚ್ಚರಿ ರೀತಿಯಲ್ಲಿ ಮಂತ್ರಿ ಸ್ಥಾನ ಒಲಿದುಬಂದಿದೆ. ಈ ಮೂಲಕ ಹೈಕಮಾಂಡ್​ ಚುನಾವಣೆ ಸಂದರ್ಭದಲ್ಲಿ ಬೋಸರಾಜ್​ ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದೆ.

ಮೊದಲೇ ಬೋಸರಾಜ್ ಅವರು ಪಕ್ಷಕ್ಕೆ ಸಾಕಷ್ಟು ದುಡಿದಿದ್ದಾರೆ. ಮೊದಲಿನಿಂದಲೂ ಹೈಕಮಾಂಡ್ ಜೊತೆ ಒಳ್ಳೆ ಸಂಪರ್ಕ ಹೊಂದಿದ್ದು, ಕೊನೆ ಕ್ಷಣದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಶೀರ್ವಾದ, ಸಿಎಂ ಸಿದ್ದರಾಮಯ್ಯ ಅವರ ಸಹಮತ ಹಾಗೂ ವರಿಷ್ಠರ ಬೆಂಬಲದ ಫಲವಾಗಿ ಅವರಿಗೆ ಅನಾಯಸವಾಗಿ ಮಂತ್ರಿಗಿರಿ ಒಲಿದಿದೆ. ಮೇಲ್ಮನೆ ಸದಸ್ಯರಾದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್‌ಗೆ ಅವಕಾಶ ತಪ್ಪಿಸಿ ಬೋಸರಾಜು ಅವರನ್ನು ಆಯ್ಕೆ ಮಾಡಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಅಲ್ಲದೇ ಇದಕ್ಕೆ ಕಾಂಗ್ರೆಸ್​ನಲ್ಲಿ ಆಕ್ಷೇಪಗಳು ವ್ಯಕ್ತವಾಗುತ್ತಿವೆ.

ಇನ್ನು ಸಚಿವ ಸಂಭವನೀಯರ ಪಟ್ಟಿಯಲ್ಲಿ ಬೋಸರಾಜ್ ಅವರ ಹೆಸರು ಬಂದಿದ್ದೇ ತಡ ರಾಯಚೂರು ಕಾಂಗ್ರೆಸ್​ನಲ್ಲಿ ಅಮಾಧಾನ ಸ್ಫೋಟಗೊಂಡಿದ್ದು, ಯಾವುದೇ ಕಾರಣಕ್ಕೂ ಬೋಸರಾಜ್ ಅವರಿಗೆ ಸಚಿವ ಸ್ಥಾನ ನೀಡಬಾರದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಂದು ಪತ್ರ ಬರೆದಿದ್ದರು. ಸಿಂಧನೂರು ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ, ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಸೇರಿದಂತೆ ರಾಯಚೂರು ಜಿಲ್ಲಾ ಕಾಂಗ್ರೆಸ್​ನ ಕೆಲ ಪದಾಧಿಕಾರಿಗಳು ಪತ್ರ ಬರೆದಿದ್ದು. ಬೋಸರಾಜ್ ಅವರಿಗೆ ಯಾವುದೇ ಕಾರಣಕ್ಕೂ ಸಚಿವ ಸ್ಥಾನ ಕೊಡಬಾರದು ಎಂದು ಆಗ್ರಹಿಸಿದ್ದರು. ಆದರೂ ಹೈಕಮಾಂಡ್​ ಬೋಸರಾಜ್ ಅವರನ್ನು ಮಂತ್ರಿಯನ್ನಾಗಿ ಮಾಡಿದ್ದು, ಮುಂದೆ ಇದು ಯಾವ ಹಂತಕ್ಕೆ ಹೋಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

Latest Indian news

Popular Stories