ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಗುಜರಾತ್‌ ಟೈಟಾನ್ಸ್‌ ತಂಡಕ್ಕೆ ಭರ್ಜರಿ ಜಯ

ಮುಂಬೈ: ಬುಧವಾರ ರಾತ್ರಿ ನಡೆದ ಅತ್ಯಂತ ರೋಚಕ ಐಪಿಎಲ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಗುಜರಾತ್‌ ಟೈಟಾನ್ಸ್‌ 5 ವಿಕೆಟ್‌ಗಳಿಂದ ಮಣಿಸಿದೆ.

ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಕೊನೆಯ ಓವರ್‌ನಲ್ಲಿ ಗೆಲ್ಲಲು 22 ರನ್‌ ಗುರಿ ಪಡೆದಿದ್ದ ಗುಜರಾತ್‌ ತನ್ನ ಗುರಿಯನ್ನು ಸಾಧಿಸಿ, ನಂಬಲಸಾಧ್ಯವಾದ ಜಯವೊಂದನ್ನು ದಾಖಲಿಸಿತು.

ಮೊದಲು ಬ್ಯಾಟಿಂಗ್‌ ಮಾಡಿದ ಹೈದರಾಬಾದ್‌ 20 ಓವರ್‌ಗಳಲ್ಲಿ 6 ವಿಕೆಟಿಗೆ 195 ರನ್‌ ಬಾರಿಸಿತು. ಇದನ್ನು ಬೆನ್ನತ್ತಿದ ಗುಜರಾತ್‌ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 199 ಚಚ್ಚಿತು. ಗುಜರಾತ್‌ಗೆ ಆರಂಭಿಕ ವೃದ್ಧಿಮಾನ್‌ ಸಹಾ (68 ರನ್‌, 38 ಎಸೆತ) ಅಬ್ಬರದ ಆರಂಭ ಒದಗಿಸಿದರು. ಆದರೆ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದು ರಶೀದ್‌ ಖಾನ್‌ (31 ರನ್‌, 11 ಎಸೆತ) ಹಾಗೂ ರಾಹುಲ್‌ ತೆವಾಟಿಯ (40 ರನ್‌, 21 ಎಸೆತ). ಕೊನೆಯ ಓವರ್‌ನಲ್ಲಿ 22 ರನ್‌ ಬೇಕಿದ್ದಾಗ ತೆವಾಟಿಯ ಮೊದಲನೇ ಎಸೆತವನ್ನು ಸಿಕ್ಸರ್‌ಗೆ ದಬ್ಬಿದರು. ನಂತರ ರಶೀದ್‌ ಖಾನ್‌ 3 ಸಿಕ್ಸರ್‌ ಬಾರಿಸಿದರು!

ಗುಜರಾತ್‌ ಕಳೆದುಕೊಂಡ ಐದೂ ವಿಕೆಟ್‌ಗಳು ಹೈದರಾಬಾದ್‌ನ ಉಮ್ರಾನ್‌ ಮಲಿಕ್‌ ಪಾಲಾಯಿತು. ಆದರೆ ಇದರ ಲಾಭ ಪಡೆಯಲು ಹೈದರಾಬಾದ್‌ ವಿಫ‌ಲವಾಯಿತು.

ಮಿಂಚಿದ ಅಭಿಷೇಕ್‌, ಮಾರ್ಕ್‌ರಮ್‌: ಮೊದಲು ಬ್ಯಾಟ್‌ ಮಾಡಿದ ಹೈದರಾಬಾದ್‌ ಪರ ಅಭಿಷೇಕ್‌ ಶರ್ಮ ಸರ್ವಾಧಿಕ 65, ಮಾರ್ಕ್‌ರಮ್‌ 56 ರನ್‌ ಬಾರಿಸಿದರು. ಕೊನೆಯಲ್ಲಿ ಶಶಾಂಕ್‌ ಕೇವಲ 6 ಎಸೆತಗಳಿಂದ ಅಜೇಯ 25 ರನ್‌ ಸಿಡಿಸಿದರು (3 ಸಿಕ್ಸರ್‌, 1 ಫೋರ್‌). ಫ‌ರ್ಗ್ಯುಸನ್‌ ಎಸೆದ ಅಂತಿಮ ಓವರ್‌ನಲ್ಲಿ 4 ಸಿಕ್ಸರ್‌ ಸೇರಿದಂತೆ 25 ರನ್‌ ಸೋರಿಹೋಯಿತು.

ಹೈದರಾಬಾದ್‌ ಆರಂಭ ಅತ್ಯಂತ ನಾಟಕೀಯವಾಗಿತ್ತು. ಮೊಹಮ್ಮದ್‌ ಶಮಿ ಎಸೆದ ಈ ಓವರ್‌ನಲ್ಲಿ 2 ವೈಡ್‌ಗಳು ದಾಖಲಾದವು. 2ನೇ ಹಾಗೂ 5ನೇ ಎಸೆತಗಳು ವೈಡ್‌ ಆಗುವುದರ ಜೊತೆಗೆ ಕೀಪರ್‌ ಸಹಾ ಅವರನ್ನು ವಂಚಿಸಿ ಬೌಂಡರಿ ಗೆರೆ ದಾಟಿದವು. ಐಪಿಎಲ್‌ ಪಂದ್ಯವೊಂದರ ಮೊದಲ ಓವರ್‌ನಲ್ಲೇ 10 ರನ್‌ ವೈಡ್‌ ಮೂಲಕ ಬಂದ ಮೊದಲ ದೃಷ್ಟಾಂತ ಇದಾಗಿದೆ.

ರಾಹುಲ್‌ ತ್ರಿಪಾಠಿ ಆರಂಭದಲ್ಲೇ ಜೀವದಾನ ಪಡೆದ ಬಳಿಕ ಶಮಿ ಅವರನ್ನು ಗುರಿ ಮಾಡಿಕೊಂಡರು. ಸತತ ಎಸೆತಗಳಲ್ಲಿ 14 ರನ್‌ ಬಾರಿಸಿದರು (6, 4, 4). ಮುಂದಿನ ಎಸೆತದಲ್ಲೇ ಶಮಿ ಲೆಗ್‌ ಬಿಫೋರ್‌ ಮೂಲಕ ತ್ರಿಪಾಠಿಗೆ ಪೆವಿಲಿಯನ್‌ ಹಾದಿ ತೋರಿಸಿದರು. ತ್ರಿಪಾಠಿ ಗಳಿಕೆ 10 ಎಸೆತಗಳಿಂದ 16 ರನ್‌.

ಮತ್ತೋರ್ವ ಆರಂಭಕಾರ ಅಭಿಷೇಕ್‌ ಶರ್ಮ ಮತ್ತು ಐಡೆನ್‌ ಮಾರ್ಕ್‌ರಮ್‌ 3ನೇ ವಿಕೆಟಿಗೆ ಜತೆಗೂಡಿದ ಬಳಿಕ ಹೈದರಾಬಾದ್‌ ಬ್ಯಾಟಿಂಗ್‌ ಹೊಸ ಚೈತನ್ಯ ಕಂಡಿತು. ಈ ಜೋಡಿ ಡೆತ್‌ ಓವರ್‌ ಆರಂಭವಾಗುವ ತನಕ ಕ್ರೀಸ್‌ ಆಕ್ರಮಿಸಿಕೊಂಡಿತು. 3ನೇ ವಿಕೆಟಿಗೆ 96 ರನ್‌ ಹರಿದು ಬಂತು. ಇಬ್ಬರಿಂದಲೂ ಅರ್ಧ ಶತಕ ದಾಖಲಾಯಿತು.

ರಶೀದ್‌ ಖಾನ್‌ ಎಸೆತವನ್ನು ಸಿಕ್ಸರ್‌ಗೆ ರವಾನಿಸುವ ಮೂಲಕ ಶರ್ಮ ತಮ್ಮ ಅರ್ಧಶತಕ ಪೂರ್ತಿಗೊಳಿಸಿದರು. ಇವರ ಕೊಡುಗೆ 42 ಎಸೆತಗಳಿಂದ 65 ರನ್‌ (6 ಫೋರ್‌, 3 ಸಿಕ್ಸರ್‌). ಶರ್ಮ ಅವರ ಮೂರೂ ಸಿಕ್ಸರ್‌ ರಶೀದ್‌ ಖಾನ್‌ ಎಸೆತದಲ್ಲೇ ಸಿಡಿಯಲ್ಪಟ್ಟಿತು. ಮಾರ್ಕ್‌ರಮ್‌ 40 ಎಸೆತಗಳಿಂದ 56 ರನ್‌ ರನ್‌ ಕೊಡುಗೆ ಸಲ್ಲಿಸಿದರು (2 ಬೌಂಡರಿ, 3 ಸಿಕ್ಸರ್‌). ಇವರು ಶಮಿ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟಿ ಫಿಫ್ಟಿ ಪೂರೈಸಿದರು. ಈ ವಿಕೆಟ್‌ ಯಶ್‌ ದಯಾಳ್‌ ಬುಟ್ಟಿಗೆ ಬಿತ್ತು. ಡೆತ್‌ ಓವರ್‌ಗಳಲ್ಲಿ ಹೈದರಾಬಾದ್‌ 4 ವಿಕೆಟ್‌ ಕಳೆದುಕೊಂಡಿತಾದರೂ 55 ರನ್‌ ಪೇರಿಸುವಲ್ಲಿ ಯಶಸ್ವಿಯಾಯಿತು.

ಸಂಕ್ಷಿಪ್ತ ಸ್ಕೋರ್‌: ಹೈದರಾಬಾದ್‌ 20 ಓವರ್‌, 195/6 (ಅಭಿಷೇಕ್‌ ಶರ್ಮ 65, ಐಡೆನ್‌ ಮಾಕ್ರìಮ್‌ 56, ಮೊಹಮ್ಮದ್‌ ಶಮಿ 39ಕ್ಕೆ 3). ಗುಜರಾತ್‌ 20 ಓವರ್‌, 199/5 (ವೃದ್ಧಿಮಾನ್‌ 68, ತೆವಾಟಿಯ 40, ರಶೀದ್‌ ಖಾನ್‌ 31, ಉಮ್ರಾನ್‌ ಮಲಿಕ್‌ 25ಕ್ಕೆ 5)

Latest Indian news

Popular Stories