ಬೆಂಗಳೂರು: ಅಪಾಯ ಮತ್ತು ಅಡೆತಡೆಗಳನ್ನು ಉಂಟುಮಾಡುವ ಮರಗಳನ್ನು ಕತ್ತರಿಸಲು ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಿದ 48 ಗಂಟೆಗಳಲ್ಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಅರಣ್ಯ ವಿಭಾಗಕ್ಕೆ ಬರೋಬ್ಬರಿ 2,000 ಅರ್ಜಿಗಳು ಬಂದಿವೆ.
ಮರ ಕಡಿಯುವ ಅಥವಾ ಕತ್ತರಿಸುವ ಮುನ್ನ ಸಂಚಾರಿ ಇಲಾಖೆಯೊಂದಿಗೆ ಸಮೀಕ್ಷೆ ನಡೆಸಿ ಸಮಾಲೋಚನೆ ನಡೆಸಲಾಗುವುದು ಎಂದು ಅರಣ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಬಿಬಿಎಂಪಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಲ್.ಜಿ.ಸ್ವಾಮಿ ಮಾತನಾಡಿ, ‘ಸಾರ್ವಜನಿಕರು ಕಳುಹಿಸಿದ ವಿವರಗಳ ಆಧಾರದ ಮೇಲೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತಿತರರನ್ನು ಸ್ಥಳಕ್ಕೆ ಕಳುಹಿಸಿ, ಮರ ಕಡಿಯುವುದು ಅಥವಾ ಅದರ ಕೊಂಬೆಗಳನ್ನು ಕತ್ತರಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಲಾಗುವುದು. ಕೊಂಬೆಗಳು ಅಥವಾ ಸ್ಥಳದಿಂದ ಮರವನ್ನು ತೆಗೆದುಹಾಕುವುದು, ಮರಗಳು ಅಥವಾ ಕೊಂಬೆಗಳು ಸಾರ್ವಜನಿಕರಿಗೆ ಅಪಾಯವನ್ನುಂಟುಮಾಡಿದರೆ ಅಥವಾ ಸಂಚಾರಕ್ಕೆ ಅಡಚಣೆಯನ್ನು ಉಂಟುಮಾಡಿದರೆ ಮಾತ್ರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ಈ ಕ್ರಮವನ್ನು ಜಂಟಿ ಪೊಲೀಸ್ ಆಯುಕ್ತ(ಸಂಚಾರ) ಎಂ.ಎನ್.ಅನುಚೇತ್ ಸ್ವಾಗತಿಸಿದ್ದಾರೆ. “ಹಳೆಯ ಮತ್ತು ಸತ್ತ ಮರಗಳು, ಕೊಂಬೆಗಳನ್ನು ಗುರುತಿಸಲು ಮತ್ತು ಅವುಗಳನ್ನು ತೆರವುಗೊಳಿಸಲು ಬೇಸಿಗೆ ಕಾಲವು ಸರಿಯಾದ ಸಮಯ. ಇಲ್ಲದಿದ್ದರೆ, ಅಂತಹ ಮರಗಳು ಮತ್ತು ಕೊಂಬೆಗಳು ರಸ್ತೆಗಳ ಉದ್ದಕ್ಕೂ ವಾಹನಗಳು ಮತ್ತು ಜನರ ಮೇಲೆ ಬೀಳಬಹುದು” ಎಂದಿದ್ದಾರೆ.
ಬಿಬಿಎಂಪಿ ಅರಣ್ಯ ಇಲಾಖೆಯು ಮರಗಳನ್ನು ಕಡಿಯಲು ನಿರ್ಧರಿಸಿದರೆ ಆ ಮರಗಳ ಪಟ್ಟಿ ಮಾಡಬೇಕು ಅಂತಹ ಮರಗಳನ್ನು ಸ್ಥಳಾಂತರ ಮಾಡಬಹುದು. ಈ ಮೂಲಕ ಹಸಿರು ಉಳಿಸಬಹುದು ಎಂದು ಈ ಹಿಂದೆ ಹಲವಾರು ಮರಗಳ ಸ್ಥಳಾಂತರದಲ್ಲಿ ಬಿಬಿಎಂಪಿಗೆ ಸಹಾಯ ಮಾಡಿದ ಮರಗಳ ತಜ್ಞ ವಿಜಯ್ ನಿಶಾಂತ್ ಅವರು ಹೇಳಿದ್ದಾರೆ.