ಸೌದಿಯ ಜೈಲಿನಲ್ಲಿದ್ದ ಅಬ್ದುಲ್ ರಹೀಂ ಬಿಡುಗಡೆಗೆ ಧರ್ಮ ಬೇಧ ಮರೆತು ಒಂದಾದ ಜನ :ಇದು ನೀವು ಓದಲೇ ಬೇಕಾದ ‘ರಿಯಲ್ ಕೇರಳ ಸ್ಟೋರಿ’

ಕ್ಯಾಲಿಕಟ್/ ಕೇರಳ: ಆಕಸ್ಮಿಕ ತಪ್ಪಿನಿಂದ ಮರಣದಂಡನೆಗೆ ಗುರಿಯಾಗಿ ಕಳೆದ 18 ವರ್ಷಗಳಿಂದ ಸೌದಿ ಆರೇಬಿಯಾದ ಜೈಲಿನಲ್ಲಿರುವ ಕೇರಳದ ಕ್ಯಾಲಿಕಟ್ ಮೂಲದ ಅಬ್ದುಲ್ ರಹೀಂನ ಬಿಡುಗಡೆಗಾಗಿ ಇಡೀ ಕೇರಳವೇ ಜಾತಿ, ಧರ್ಮ ಮೀರಿ ಒಂದಾಗಿದ್ದು, ಆತನ ಬಿಡುಗಡೆಗೆ ಬೇಕಿದ್ದ ಬ್ಲಡ್ ಮನಿ (ದಯಾ ನಿದಿ) 34 ಕೋಟಿ ರೂ. ಸಂಗ್ರಹಿಸಿ ಇಡೀ ವಿಶ್ವದ ಗಮನ ಸೆಳೆದಿದ್ದಾರೆ.

ಪ್ರಕರಣದ ವಿವರ: ಡ್ರೈವರ್ ವಿಸಾದಲ್ಲಿ ಸೌದಿ ಅರೇಬಿಯಾದಲ್ಲಿ ಕೆಲಸಕ್ಕೆ ತೆರಳಿದ್ದ ಅಬ್ದುಲ್ ರಹೀಂ 2006ರಲ್ಲಿ ಕೊಲೆ ಆರೋಪದಲ್ಲಿ ಜೈಲು ಸೇರಿದ್ದರು. ಆಗ ಅಬ್ದುಲ್ ರಹೀಂಗೆ ಕೇವಲ 26 ವರ್ಷವಾಗಿತ್ತು.
ಡ್ರೈವರ್ ವಿಸಾದಲ್ಲಿ ತೆರಳಿದ್ದ ರಹೀಂಗೆ ತನ್ನ ಪ್ರಾಯೋಜಕ ಅರಬಿಯ, ಕುತ್ತಿಗೆ ಕೆಳಗೆ ಬಲಹೀನಗೊಂಡ ಮಗ ಫಾಯಿಝ್‌ನನ್ನು ನೋಡಿಕೊಳ್ಳುವುದು ಪ್ರಮುಖ ಕೆಲಸವಾಗಿತ್ತು. ಫಾಯಿಝ್‌ನ ಕುತ್ತಿಗೆಗೆ ಅಳವಡಿಸಲಾಗಿದ್ದ ಉಪಕರಣದ ಮೂಲಕ ಅವನಿಗೆ ಅನ್ನ, ಆಹಾರವನ್ನು ನೀಡಲಾಗುತ್ತಿತ್ತು.
ಆದರೆ 2006ಡಿಸೆಂಬರ್ 24ರಂದು ಫಾಯಿಝ್‌ನನ್ನು ಕಾರಿನಲ್ಲಿ ಕೊಂಡೊಯ್ಯುವ ವೇಳೆ ಪ್ರಮಾದ ವಶಾತ್ ಅಬ್ದುಲ್ ರಹೀಂನ ಕೈ ತಾಗಿ ಕುತ್ತಿಗೆಗೆ ಅಳವಡಿಸಿದ್ದ ವಿಶೇಷ ಉಪಕರಣ ಕಳಚಿ ಬಿದ್ದಿತ್ತು. ಇದರಿಂದಾಗಿ ಫಾಯಿಝ್ ಆರೋಗ್ಯ ಹದಗೆಟ್ಟಿದ್ದಲ್ಲದೇ, ಬಳಿಕ ಮೃತಪಟ್ಟಿದ್ದ.

ಕೊಲೆ ಆರೋಪದ ಮೇಲೆ ಜೈಲು ಪಾಲಾಗಿದ್ದ ಅಬ್ದುಲ್ ರಹೀಂಗೆ ವಿಚಾರಣೆ ಬಳಿಕ ರಿಯಾದ್‌ನ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಶಿಕ್ಷೆಯಿಂದ ಪಾರುಗೊಳಿಸುವ ನಿಟ್ಟಿನಲ್ಲಿ ಉನ್ನತ ಮಟ್ಟದ ಪ್ರಯತ್ನಗಳು ನಡೆದರೂ ಮೃತ ಬಾಲಕ ಕುಟುಂಬ ಕ್ಷಮಾಪಣೆ ನೀಡಿರಲಿಲ್ಲ. ಕೊನೆಗೆ 34 ಕೋಟಿ ರೂ. ದಯಾ ನಿಧಿ (ಬ್ಲಡ್ ಮನಿ) ನೀಡಿದರೆ ಕ್ಷಮಾಪಣೆ ನೀಡಿ ಜೈಲಿನಿಂದ ಬಿಡುಗಡೆ ಗೊಳಿಸುವುದಾಗಿ ಮೃತ ಬಾಲಕ ಪೋಷಕರು ಹೇಳಿದ್ದರು.

ಇನ್ನೇನು ಕೆಲವೇ ದಿನಗಳಲ್ಲಿ ಅಬ್ದುಲ್ ರಹೀಂ ನ್ಯಾಯಾಲಯದ ವಿಧಿಯಂತೆ ಮರಣ ದಂಡನೆಗೆ ಒಳಗಾಗಬೇಕಿತ್ತು. 34 ಕೋಟಿ ರೂ. ಸಂಗ್ರಹಿಸಲಾಗದೆ ಕ್ಯಾಲಿಕಟ್‌ನಲ್ಲಿದ್ದ ರಹೀಂ ಕುಟುಂಬ ಆಸೆಯನ್ನೇ ಬಿಟ್ಟಿದ್ದರು. ಆದರೆ ತೀರ್ಪು ಅನುಷ್ಠಾನಗೊಳಿಸುವ ದಿನ ಹತ್ತಿರ ಬರುತ್ತಿದ್ದಂತೆ ಕೇರಳದ ಜನ ಒಟ್ಟಾದರು. ಅಬ್ದುಲ್ ರಹೀಂ ಬಿಡುಗಡೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಬೃಹತ್ ಅಭಿಯಾನವನ್ನೇ ನಡೆಸಿದರು. ಕ್ರೌಡ್ ಫಂಡ್ ಸಂಗ್ರಹಿಸುವ ನಿಟ್ಟಿನಲ್ಲಿ ಸೇವ್ ಅಬ್ದುಲ್ ರಹೀಂ ಎಂಬ ಆ್ಯಪ್ ರಚಿಸಿ ಹಣ ಸಂಗ್ರಹ ಮಾಡತೊಡಗಿದರು. ಆರಂಭಿಕ ಹಂತದಲ್ಲಿ ಕೇವಲ ಲಕ್ಷಗಳಷ್ಟೇ ಹಣ ಸಂಗ್ರಹವಾಗಿತ್ತು. ಬಳಿಕ ಪ್ರಚಾರವನ್ನು ತೀವ್ರಗೊಳಿಸಲಾಗಿತ್ತು. ಇದಕ್ಕೆ ಕೇರಳದ ಪ್ರಮುಖ ಸ್ವರ್ಣ ಉದ್ಯಮಿ ಬೋಬಿ ಚೆಮ್ಮನ್ನೂರು ಕೈ ಜೋಡಿಸುತ್ತಿದ್ದಂತೆ ಹಣ ಮತ್ತಷ್ಟು ವೇಗವಾಗಿ ಸಂಗ್ರಹವಾಗತೊಡಗಿತು. ಈದುಲ್ ಫಿತರ್ ದಿನ ಹಣ ಸುಮಾರು 30 ಕೋಟಿ ವರೆಗೆ ಸಂಗ್ರಹವಾಗಿತ್ತು.

ಇದೀಗ 34 ಕೋಟಿ 45 ಲಕ್ಷ ರೂ. ಸಂಗ್ರಹವಾಗಿದ್ದು, ಸದ್ಯ ಕ್ರೌಂಡ್ ಫಂಡಿಗ್ ನಿಲ್ಲಿಸಲಾಗಿದೆ. ಈ ಮೊತ್ತವನ್ನು ಅಬ್ದುಲ್ ರಹೀಂ ತಾಯಿಗೆ ನೀಡಲಾಗಿದ್ದು, ಶೀಘ್ರದಲ್ಲೇ ರಹೀಂ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.

Latest Indian news

Popular Stories