ಎಬಿವಿಪಿ ಕಾರ್ಯಕರ್ತರು ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ನುಗ್ಗಿ ಗಲಾಟೆ – ಆರೋಪ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರ ಗುಂಪು ಕಾಲೇಜಿಗೆ ನುಗ್ಗಿ ಕ್ಯಾಂಪಸ್‌ನಲ್ಲಿ ಗದ್ದಲ ಎಬ್ಬಿಸಿ, ಘೋಷಣೆಗಳನ್ನು ಕೂಗುತ್ತಾ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದೆ ಎಂದು ದೆಹಲಿ ವಿ.ವಿಯ ಮಹಿಳಾ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಸೆಪ್ಟೆಂಬರ್ 22 ರಂದು ನಡೆಯಲಿರುವ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ (ಡಿಯುಎಸ್‌ಯು) ಚುನಾವಣೆಗೆ ಕ್ಯಾಂಪಸ್‌ನಲ್ಲಿ ಪ್ರಚಾರದ ನಡುವೆ ಸೋಮವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಮೂರು ವರ್ಷಗಳ ನಂತರ ಕ್ಯಾಂಪಸ್‌ನಲ್ಲಿ ಈ ಚುನಾವಣೆ ನಡೆಯುತ್ತಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಯುವಕರ ಗುಂಪು ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ. ಎಬಿವಿಪಿ ಕಾರ್ಯಕರ್ತರು ಅನುಮತಿಯಿಲ್ಲದೆ ಪ್ರವೇಶಿಸಿ ವಿದ್ಯಾರ್ಥಿನಿಯರ ಬಗ್ಗೆ ಅಶ್ಲೀಲ ಹೇಳಿಕೆ ನೀಡಿದ್ದರಿಂದ ಮಿರಾಂಡಾ ಹೌಸ್ ವಿದ್ಯಾರ್ಥಿಗಳಿಗೆ AISA ಬೆಂಬಲ ವ್ಯಕ್ತಪಡಿಸಿದೆ.

“ಸುಮಾರು 15-20 ಎಬಿವಿಪಿ ಕಾರ್ಯಕರ್ತರು ಡಿಯುಎಸ್‌ಯು ಚುನಾವಣೆಗೆ ಪ್ರಚಾರ ಮಾಡುತ್ತಿದ್ದ ಅಭ್ಯರ್ಥಿಗಳೊಂದಿಗೆ ಕ್ಯಾಂಪಸ್‌ಗೆ ಪ್ರವೇಶಿಸಿದರು. ಕಾಲೇಜು ವಿದ್ಯಾರ್ಥಿನಿಯರ ಬಗ್ಗೆ ಅಶ್ಲೀಲ ಕಮೆಂಟ್ ಮಾಡಿ ಕಿರುಕುಳ ನೀಡಲಾರಂಭಿಸಿದ್ದಾರೆ. ಇದನ್ನು ಖಂಡಿಸಿ ಪ್ರಾಂಶುಪಾಲರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದೇವೆ. ಅವರ ವಿರುದ್ಧ ಕಾಲೇಜು ಆಡಳಿತ ಮಂಡಳಿ ಎಫ್‌ಐಆರ್‌ ದಾಖಲಿಸಬೇಕು” ಎಂದು ಎಐಎಸ್‌ಎ ಡಿಯು ಕಾರ್ಯದರ್ಶಿ ಅಂಜಲಿ ಶರ್ಮಾ ಹೇಳಿದ್ದಾರೆ.

ಮಿರಾಂಡಾ ಹೌಸ್‌ನ ಪ್ರಾಂಶುಪಾಲರಾದ ಬಿಜಯಲಕ್ಷ್ಮಿ ನಂದಾ ಅವರು ವಿಡಿಯೋವನ್ನು ವೀಕ್ಷಿಸಿದ್ದು, ಚುನಾವಣಾ ಪ್ರಚಾರಕ್ಕಾಗಿ ಕ್ಯಾಂಪಸ್‌ಗೆ ಬರಲು ಕೇವಲ ನಾಲ್ವರು ವಿದ್ಯಾರ್ಥಿನಿಯರಿಗೆ ಮಾತ್ರ ಅವಕಾಶವಿದೆ ಎಂದು ಹೇಳಿದರು. ಅನೇಕ ಯುವಕರು ಅನುಮತಿ ಇಲ್ಲದೆ ಕ್ಯಾಂಪಸ್‌ಗೆ ಬಂದಿದ್ದಾರೆ ಎಂದು ಹೇಳಿದ್ದಾರೆ.

Latest Indian news

Popular Stories