ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಅಂಬಲಪಾಡಿ ಜಂಕ್ಷನ್ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಂಡರ್ಪಾಸ್ ಹಾಗೂ ಮೇಲ್ಸೇತುವೆ ಕಾಮಗಾರಿಯನ್ನು ಡಿ.16ರಿಂದ ಆರಂಭಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಅಭಿಯಂತರ ಸಾಹು ತಿಳಿಸಿದ್ದಾರೆ.
ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ 66ರ ಬಳಕೆದಾರರ ವೇದಿಕೆಯ ವತಿಯಿಂದ ಶನಿವಾರ ಅಂಬಲಪಾಡಿ ವಸಂತ ಮಂಟಪದಲ್ಲಿ ಕರೆಯಲಾದ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡುತಿದ್ದರು.
23.53ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಈ ಸೇತುವೆ ಕಾಮಗಾರಿಯನ್ನು 2026ರ ಮೇ ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಸುಮಾರು 1.2 ಕಿ.ಮೀ. ಉದ್ದದ ಈ ಮೇಲ್ಸೇತುವೆ ಕಾಮಗಾರಿಗೆ ಟೆಂಡರ್ ಆಗಿದ್ದು, ಎಲ್ಲ ರೀತಿಯ ಸಿದ್ಧತೆ ಮಾಡಲಾಗಿದೆ ಎಂದು ತಿಳಿಸಿದರು.
ಸುಮಾರು 22 ಮೀಟರ್ ಅಗಲದ ಈ ಮೇಲ್ಸೇತುವೆಯಲ್ಲಿ ಆರು ಲೇನ್ಗಳಿರುತ್ತವೆ. ಅದೇ ರೀತಿ ಬ್ರಹ್ಮಗಿರಿ- ಕಡೆಕಾರ್ ಸಂಪರ್ಕಿಸುವ ರಸ್ತೆಯ ಅಂಡರ್ಪಾಸ್ ಮಧ್ಯೆ ಪಿಲ್ಲರ್ ಬರಲಿದ್ದು, ತಲಾ 15 ಮೀಟರ್ ಅಗಲದ ಒಟ್ಟು 30 ಮೀಟರ್ ಅಗಲದ ರಸ್ತೆ ಮಾಡಲಾಗುತ್ತದೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.
ಸೇತುವೆ ಸುಮಾರು 5.5. ಮೀಟರ್ ಎತ್ತರ ಇರುತ್ತದೆ. ಇಲ್ಲಿನ ಸರ್ವಿಸ್ ರಸ್ತೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಕರ್ಲಾ ಕನ್ಸ್ಸ್ಟ್ರಕ್ಷನ್ ಈ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದೆ. ಈ ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜೀ ಮಾಡುವುದಿಲ್ಲ ಎಂದು ಅವರು ಭರವಸೆ ನೀಡಿದರು.
ವೇದಿಕೆಯ ಸಂಚಾಲಕ ಭಾಸ್ಕರ ಶೆಟ್ಟಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 66ರ ಪ್ರಮುಖ ಜಂಕ್ಷನ್ಗಳಲ್ಲಿ ಒಂದಾಗಿರುವ ಅಂಬಲಪಾಡಿಯಲ್ಲಿ ಹಲವು ಅಪಘಾತಗಳು ಸಂಭವಿಸುತ್ತಿರುತ್ತದೆ. ಸಾಕಷ್ಟು ಪ್ರಾಣಹಾನಿಯಾಗಿದೆ. ಇದನ್ನು ತಡೆಯುವ ಉದ್ದೇಶದಿಂದ ಇಲ್ಲಿ ಮೇಲ್ಸೇತುವೆ ನಿರ್ಮಿಸುವಂತೆ ಬೇಡಿಕೆ ಮುಂದಿಟ್ಟು ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗಿದೆ ಎಂದು ಹೇಳಿದರು.
ಈ ಕಾಮಗಾರಿಯಿಂದ ಇಲ್ಲಿನ ಉದ್ಯಮಿಗಳಿಗೆ ತೊಂದರೆ ಆಗುವುದಕ್ಕಿಂತ ಇಲ್ಲಿ ಸಂಭವಿಸುತ್ತಿರುವ ಅಪಘಾತದಿಂದ ಆಗುತ್ತಿರುವ ಜೀವಹಾನಿ ತಡೆಯುವುದು ಮುಖ್ಯವಾಗಿದೆ. ಮೂಲ ನಕ್ಷೆಯಲ್ಲಿನ ಯಾವುದೇ ಬದಲಾವಣೆ ಮಾಡದೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಈ ಬಗ್ಗೆ ಜನಪ್ರತಿನಿಧಿ ಗಳು ಹಾಗೂ ಜಿಲ್ಲಾಡಳಿತ ಸಹಕಾರ ನೀಡಬೇಕೆಂದು ಅವರು ಆಗ್ರಹಿಸಿದರು.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಪರ್ಕಳ, ಇಂದ್ರಾಳಿ ಹಾಗೂ ಸಂತೆಕಟ್ಟೆಯಲ್ಲಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆಯಿಂದ ಸಾರ್ವಜನಿಕರು ಇಲಾಖೆ ಮೇಲೆ ಭರವಸೆ ಕಳೆದುಕೊಂಡಿದ್ದಾರೆ. ಆ ನಿಟ್ಟಿನಲ್ಲಿ ಈ ಕಾಮಗಾರಿಗೆ ಮೊದಲು ಸಾರ್ವಜನಿಕರ ಸಭೆ ಕರೆದು ಸಲಹೆಗಳನ್ನು ಸ್ವೀಕರಿಸಲಾಗುತ್ತಿದೆ. ಈ ಕಾಮಗಾರಿಯಲ್ಲಿ ಯಾವುದೇ ಅಡೆತಡೆಯಾಗದಂತೆ ಕ್ರಮ ವಹಿಸಲಾಗುವುದು. ಉತ್ತಮ ರಸ್ತೆ ನಿರ್ಮಿಸಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಮಾತನಾಡಿದರು. ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರೆಸಿಡೆನ್ಸಿಯಲ್ ಇಂಜಿನಿ ಯರ್ ರವಿ ಕುಮಾರ್, ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಸದಸ್ಯ ಹರೀಶ್ ಶೆಟ್ಟಿ, ಅಂಬಲಪಾಡಿ ಗ್ರಾಪಂ ಅಧ್ಯಕ್ಷೆ ಸುಜಾತ ಶೆಟ್ಟಿ, ಕಡೆಕಾರು ಗ್ರಾಪಂ ಅಧ್ಯಕ್ಷ ಜಯಕರ ಶೇರಿಗಾರ್ ಮೊದಲಾದವರು ಉಪಸ್ಥಿತರಿದ್ದರು