ನವದೆಹಲಿ: ಖಲಿಸ್ಥಾನದ ತೀವ್ರಗಾಮಿ ಅಮೃತ್ ಪಾಲ್ ಗೆ ಆಶ್ರಯ ನೀಡಿದ್ದ ಇಬ್ಬರು ಯುವಕರನ್ನು (ಸಹೋದರರು) ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಕಳೆದ 1 ತಿಂಗಳಿನಿಂದ ಪಂಜಾಬ್ ಪೊಲೀಸರು ಅಮೃತ್ ಪಾಲ್ ಸಿಂಗ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ರಾಜಪುರ್ ಭಯಾನ್ ಗ್ರಾಮದ ನಿವಾಸಿಗಳಾದ ಇಬ್ಬರು ಹರ್ದೀಪ್ ಸಿಂಗ್ (22) ಕುಲ್ದೀಪ್ ಸಿಂಗ್ (30) ಸಹೋದರರನ್ನು ಬಂಧಿಸಿ ಅವರನ್ನು ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ನಂತರ ಕೋರ್ಟ್ ಅವರನ್ನು ನಾಲ್ಕು ದಿನಗಳ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ಬಂಧಿತ ಸಹೋದರರ ಪರ ವಕೀಲರಾದ ತನ್ಹೀರ್ ಸಿಂಗ್ ಬರಿಯಾನಾ ಮತ್ತು ಜೆಎಸ್ ಭುಟ್ಟಾ, ಕಾರ್ಮಿಕರಾಗಿ ಕೆಲಸ ಮಾಡುವ ಹರ್ದೀಪ್ ಮತ್ತು ಕುಲದೀಪ್ ಅವರನ್ನು ಅಮೃತಪಾಲ್ ಸಿಂಗ್ ಅವರಿಗೆ ಆಶ್ರಯ ನೀಡಿದ ಆರೋಪದ ಮೇಲೆ ಮೆಹ್ತಿಯಾನ ಪೊಲೀಸ್ ಠಾಣೆಯಿಂದ ಭಾರತೀಯ ದಂಡ ಸಂಹಿತೆಯ 212 (ಆಪರಾಧಿಗಳಿಗೆ ಆಶ್ರಯ ನೀಡುವ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಹೇಳಿದರು.
ಮಾರ್ಚ್ 28 ರಂದು ಅಮೃತಪಾಲ್ ಪೊಲೀಸರಿಂದ ತಪ್ಪಿಸಿಕೊಂಡು ಮರ್ನಾಯನ್ ಗ್ರಾಮವನ್ನು ತಲುಪಿದ ನಂತರ , ಟ್ರ್ಯಾಕ್ಟರ್-ಟ್ರೇಲರ್‌ನಲ್ಲಿ ಮರಳು ತುಂಬುತ್ತಿದ್ದ ಇಬ್ಬರು ಸಹೋದರರನ್ನು ಭೇಟಿಯಾಗಿದ್ದ. ಈ ಬಳಿಕ ಅಮೃತಪಾಲ್ ನ್ನು ತಮ್ಮ ಮನೆಗೆ ಕರೆದೊಯ್ದ ಈ ಸಹೋದರರು ಅಮೃತ್ ಪಾಲ್ ಗೆ ಆಹಾರ ಮತ್ತು ಬಟ್ಟೆಗಳನ್ನು ನೀಡಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಕಳೆದ ತಿಂಗಳು ಅಮೃತಪಾಲ್ ಮತ್ತು ಅವರ ಸಂಘಟನೆಯ ‘ವಾರಿಸ್ ಪಂಜಾಬ್ ದೇ.’ ಸದಸ್ಯರ ವಿರುದ್ಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು.