ಅಮಿತ್ ಶಾ ಗೂಂಡಾ, ಅವರ ವಿರುದ್ಧ ಕ್ರಿಮಿನಲ್ ಕೇಸ್ ಗಳಿವೆ: ಯತೀಂದ್ರ ಸಿದ್ದರಾಮಯ್ಯ

ಹನೂರು (ಚಾಮರಾಜನಗರ): ಕೇಂದ್ರ ಗೃಹ ಸಚಿವ ಅಮಿತ್‌ ಶಾ ಒಬ್ಬ ಗೂಂಡಾ, ರೌಡಿ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಇಂತಹವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಪಕ್ಕದಲ್ಲಿ ಕೂರಿಸಿಕೊಂಡಿದ್ದಾರೆಂದು ಕಾಂಗ್ರೆಸ್‌ ಮುಖಂಡ ಯತೀಂದ್ರ ಸಿದ್ದರಾಮಯ್ಯ ಅವರು ಶುಕ್ರವಾರ ವಾಗ್ದಾಳಿ ನಡೆಸಿದರು.

ಹನೂರಿನಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಗುಜರಾತ್‍ನಲ್ಲಿ ನರಮೇಧ ಮಾಡಿದವರು ಯಾರು? ಇಂತಹವರು ದೇಶದ ಉನ್ನತ ಸ್ಥಾನದಲ್ಲಿದ್ದಾರೆ. ಕ್ರಿಮಿನಲ್ ಚಟುವಟಿಕೆಯುಳ್ಳ ಇಂತಹವರನ್ನು ಮೋದಿ ತಮ್ಮ ಪಕ್ಕದಲ್ಲಿ ಕೂರಿಸಿಕೊಂಡು ಆಡಳಿತ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.

ಪ್ರಧಾನಿ ಮೋದಿ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದರು, ಅದು ಆಗಲಿಲ್ಲ. ಈಗ ನಿರೋದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ ಮಾಡೋದು ಕೇಂದ್ರ ಸರ್ಕಾರದ ಹೊಣೆ ಅಲ್ಲ ಎಂದು ಹೇಳುತ್ತಿದ್ದಾರೆ. ಕಪ್ಪು ಹಣ ವಾಪಸ್ ತರುತ್ತೇವೆ ಎಂದಿದ್ದರು, ತಂದರೇ? ಸ್ವಿಸ್ ಬ್ಯಾಂಕ್‍ನಲ್ಲಿ ಯಾರ ಖಾತೆಯಿದೆ ಎಂದು ಪಟ್ಟಿ ಕೂಡ ರಿಲೀಸ್ ಮಾಡಲಿಲ್ಲ. ಪೆಟ್ರೋಲ್ ಡೀಸೆಲ್ ರೇಟ್ ಹೆಚ್ಚಾಗಿ ಹೋಗಿದೆ ಎಂದು ವಾಗ್ದಾಳಿ ನಡೆಸಿದರು.

400ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ, 400ಕ್ಕೂ ಹೆಚ್ಚು ಸ್ಥಾನ ಬಂದರೆ ಸಂವಿಧಾನ ಬದಲಾವಣೆ ಮಾಡುವುದು ಇವರ ಹಿಡನ್ ಅಜೆಂಡಾ ಆಗಿದೆ. ದೇಶದ ಇತಿಹಾಸದಲ್ಲೇ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಸರ್ಕಾರ ಎಂದರೆ ಅದು ಮೋದಿ ಸರ್ಕಾರ ಎಂದು ತೀವ್ರ ವಾಗ್ದಾಳಿ ನಡೆಸಿದರು.

Latest Indian news

Popular Stories