ಕಾರವಾರ : ನಮ್ಮ ಪಕ್ಷದ ರಾಹುಲ್ ಗಾಂಧಿಯವರು ಘೋಷಿಸಿದ ಪಂಚ ನ್ಯಾಯದಲ್ಲಿ ಅತಿಕ್ರಮಣದಾರರಿಗೆ ಹಕ್ಕು ಕೂಡ ಸೇರಿದೆ. ನೀವೆಲ್ಲ ಆಶೀರ್ವಾದ ಮಾಡಿದರೆ ಸಂಸತ್ ನ ಮೊದಲ ಅಧಿವೇಶನದಲ್ಲೇ ಈ ಸಮಸ್ಯೆ ಬಗ್ಗೆ ಮಾತನಾಡಿ ಅತಿಕ್ರಮಣದಾರರ ಧ್ವನಿಯಾಗುವೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಭರವಸೆ ನೀಡಿದರು.
ಹಳಿಯಾಳದಲ್ಲಿ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣಾ ಪೂರ್ವಭಾವಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ೧೦ ವರ್ಷಗಳಿಂದ ಕೇವಲ ಸುಳ್ಳಿನಿಂದಲೇ ನಡೆದಿದೆ. ಹೀಗಾಗಿ ಸುಳ್ಳು ಭರವಸೆಗಳ ವಿರುದ್ಧ ಈ ಚುನಾವಣೆ ನಡೆಯುತ್ತಿದೆ. ಬಡವರಿಗಾಗಿ, ರೈತರಿಗೆ ನ್ಯಾಯ ಕೊಡಿಸಲು, ಮಹಿಳಾ ಸನ್ಮಾನಕ್ಕಾಗಿ ಈ ಚುನಾವಣೆ ನಡೆಯುತ್ತಿದೆ. ೧೦ ವತಷಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಏನೂ ಮಾಡಿಲ್ಲವೆಂಬುದು ಜನರಿಗೂ ಗೊತ್ತಿದೆ. ಕಳೆದ ಒಂಬತ್ತು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಏನು ಮಾಡಿದೆ ಎಂಬುದೂ ಗೊತ್ತಿದೆ. ಆಪರೇಷನ್ ಮಾಡಿ, ಸುಳ್ಳು ಭರವಸೆ ನೀಡಿ ಮಾಡಿದ ಸರ್ಕಾರ ನಮ್ಮದಲ್ಲ. ನುಡಿದಂತೆ ನಡೆದ ಸರ್ಕಾರವಿದ್ದರೆ ಅದು ಕಾಂಗ್ರೆಸ್ ಎಂದರು.
ಪ್ರತಿ ಕುಟುಂಬಕ್ಕೆ ಐದು ಗ್ಯಾರಂಟಿಯ ಮೂಲಕ ಐದು ಸಾವಿರ ನೀಡಲಾಗುತ್ತಿದೆ. ದೇವಸ್ಥಾನ ಕಟ್ಟುತ್ತೇವೆಂದು ರಾಜಕೀಯ ಮಾಡುವವರು ಬಿಜೆಪಿ. ಜಾತಿ, ಧರ್ಮ ರಾಜಕಾರಣ ಮಾಡುವವರು ಅವರು. ಛತ್ರಪತಿ ಶಿವಾಜಿ ಮಹಾರಾಜರ ಹೆಸರನ್ನ ದುರುಪಯೋಗಪಡಿಸಿಕೊಂಡು ಅವಮಾನ ಮಾಡುತ್ತಿದ್ದಾರೆ. ನಾವು ಶಿವಾಜಿಯವರ ಹೆಸರನ್ನ ರಾಜಕೀಯಕ್ಕೆ ಬಳಸಲ್ಲ; ಆದರೆ ಅವರ ದಾರಿಯಲ್ಲಿ ನಾವು ನಡೆಯುತ್ತೇವೆ. ನಮ್ಮದು ಎಲ್ಲಾ ಜಾತಿಯನ್ನು ಒಗ್ಗೂಡಿಸಿಕೊಂಡು ಹೋಗುವ ಪಕ್ಷ. ಶಿವಾಜಿಯಂತೆ ಮತ್ತೆ ಹಿಂದವಿ ಸ್ವರಾಜ್ಯ ಕಟ್ಟುವ ಕಾಲ ಬಂದಿದೆ ಎಂದರು.
ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾತನಾಡಿ, ಉತ್ತರಕನ್ನಡ ಲೋಕಸಭಾ ಕ್ಷೇತ್ರ ಭೌಗೋಳಿಕವಾಗಿ ವಿಶಾಲ ಕ್ಷೇತ್ರ. ಅಭ್ಯರ್ಥಿಯೇ ಎಲ್ಲೆಡೆ ಪ್ರಚಾರಕ್ಕೆ ತೆರಳಲು ಸಾಧ್ಯವಾಗದ ಕಾರಣ ತಾವೇ ಅಭ್ಯರ್ಥಿ ಎಂದು ಕಾರ್ಯಕರ್ತರು ಮನೆಮನೆಗೆ ಹೋಗಬೇಕು. ಗ್ಯಾರಂಟಿ ಎಂದಾಗ ಮೋದಿ ನಮ್ಮ ಮೇಲೆ ಟೀಕೆ ಮಾಡಿದ್ದರು. ಆದರೀಗ ಅವರೇ ‘ಯೇ ಮೋದಿ ಕೀ ಗ್ಯಾರಂಟಿ’ ಎನ್ನುತ್ತಾರೆ. ಅವರು ನಮ್ಮ ಗ್ಯಾರಂಟಿ ಶಬ್ದವನ್ನ ಕಳವು ಮಾಡಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೋದಿ ಜಾಗೃತರಾಗಿದ್ದಾರೆ. ಎರಡು ಕೋಟಿ ಉದ್ಯೋಗ ಕೊಡುತ್ತೇವೆ ಎಂದ ಬಿಜೆಪಿಯಿಂದ ಈಗ ನಿರುದ್ಯೋಗ ಬೆಳೆದುಬಿಟ್ಟಿದೆ ಎಂದರು. ಈ ಸಲ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಆಶೀರ್ವದಿಸಿ ಗೆಲ್ಲಿಸಬೇಕಿದೆ. ಪ್ರಾಮಾಣಿಕವಾಗಿ, ನಿಷ್ಠೆಯಿಂದ ಅವರು ಕೆಲಸ ಮಾಡಲಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಬಿಜೆಪಿಗರ ಸುಳ್ಳು, ಅವರ ದಬ್ಬಾಳಿಕೆಯಿಂದಾಗಿ ನಮಗೆ ಕಳೆದ ೩೦ ವರ್ಷಗಳಿಂದ ನಮ್ಮ ಪಕ್ಷದಿಂದ ಸಂಸದರನ್ನಾಗಿಸಲು ಸಾಧ್ಯವಾಗಿಲ್ಲ. ಅದೇ ಸುಳ್ಳುಗಳು ಅವರಿಗೀಗ ಮುಳ್ಳಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಡಿ.ಚೌಗುಲೆ, ಶಂಕರ್, ತಾಲೂಕು ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಮಾಲಾ, ವಕ್ತಾರ ಉಮೇಶ್ ಬೋಳಶೆಟ್ಟಿ, ಯುವ ಘಟಕದ ಅಧ್ಯಕ್ಷ ರವಿ ತೋರಣಗಟ್ಟಿ ಮುಂತಾದವರಿದ್ದರು.
***