ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಅನ್ನ ಭಾಗ್ಯ ಯೋಜನೆಗೆ ನೆರವು ನೀಡಲು 3 ಕೇಂದ್ರೀಯ ಸಂಸ್ಥೆಗಳು ಮುಂದೆ ಬಂದಿವೆ.
ಕೇಂದ್ರೀಯ ಸ್ವಾಮ್ಯದ ಮೂರು ಸಂಸ್ಥೆಗಳಾದ ರಾಷ್ಟ್ರೀಯ ಗ್ರಾಹಕರ ಸಹಕಾರ ಒಕ್ಕೂಟ (ಎನ್ ಸಿಸಿಎಫ್), ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳ (ನಾಫೆಡ್) ಮತ್ತು ಭಾರತೀಯ ಆಹಾರ ನಿಗಮ (ಎಫ್ ಸಿಐ) ರಾಜ್ಯ ಸರ್ಕಾರಕ್ಕೆ ಅಕ್ಕಿ ನೀಡಲು ತಾತ್ವಿಕ ಒಪ್ಪಿಗೆ ನೀಡಿವೆ ಎಂದು ತಿಳಿದುಬಂದಿದೆ.
ಆದರೆ, ಮೂರು ಸಂಸ್ಥೆಗಳ ಅಕ್ಕಿಯ ದರ ಬಲು ದುಬಾರಿಯಾಗಿದ್ದು, ಸಾಗಾಣಿಕೆ ವೆಚ್ಚ ಸೇರಿ ಪ್ರತಿ ಕೆ.ಜಿ ಗೆ 40 ರೂ. ಅಧಿಕ ದಾಟುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಇದು FCI ಪೂರೈಕೆ ಮಾಡುತ್ತಿದ್ದ ದರಕ್ಕಿಂತ ಹೆಚ್ಚಾಗಲಿದೆ ಎನ್ನಲಾಗಿದೆ.
ಶನಿವಾವರಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಸಭೆಯಲ್ಲಿ ಕೇಂದ್ರೀಯ ಸಂಸ್ಥೆಗಳ ಅಧಿಕಾರಿಗಳು ಭಾಗಿಯಾಗಿದ್ದರು.
ಮಾತುಕತೆ ವೇಳೆ ಪ್ರತಿ ಕೆಜಿಗೆ ರೂ.34ರಂತೆ ಅಕ್ಕಿ ಖರೀದಿ ಮಾಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಆದರೆ, ರಾಜ್ಯ ಸರ್ಕಾರವೇ ಸಾರಿಗೆ ವೆಚ್ಚವನ್ನು ಭರಿಸಬೇಕಾಗಿದ್ದು, ಏಜೆನ್ಸಿಗಳಿಗೆ ಸುಮಾರು 1 ಪ್ರತಿಶತದಷ್ಟು ಕಮಿಷನ್ ಅನ್ನು ಪಾವತಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಈ ಸಭೆಗೂ ಮುನ್ನ ಸಚಿವ ಮುನಿಯಪ್ಪ ಅವರು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿತ ವಿತರಣಾ ಸಚಿವ ಪಿಯೂಷ್ ಗೋಯಲ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ, ಅನ್ನಭಾಗ್ಯ ಯೋಜನೆಗೆ ಅಕ್ಕಿ ಒದಗಿಸುವಂತೆ ಮನವಿ ಮಾಡಿಕೊಂಡಿದ್ದರು. ಆದರೆ, ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರಲಿಲ್ಲ.