ಬಿಹಾರದಲ್ಲಿ ನಿರ್ಮಾಣ ಹಂತದ ಮತ್ತೊಂದು ಸೇತುವೆ ಕುಸಿತ; ವಾರದಲ್ಲಿ ಮೂರನೇ ಘಟನೆ

ಮೋತಿಹಾರಿ: ಬಿಹಾರದಲ್ಲಿ ನಿರ್ಮಾಣ ಹಂತದ ಸೇತುವೆಗಳ ಕುಸಿತ ಪ್ರಕರಣ ಮುಂದುವರೆದಿದೆ. ಭಾನುವಾರ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ಮತ್ತೊಂದು ಸೇತುವೆಯೊಂದು ಕುಸಿದು ಬಿದ್ದಿದೆ. ಇದು ಇದೇ ವಾರದೊಳಗೆ ಸಂಭವಿಸಿದ ಮೂರನೇ ಘಟನೆ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೋತಿಹಾರಿಯ ಘೋರಸಹಸ್ ಬ್ಲಾಕ್ ನಲ್ಲಿ ಈ ಘಟನೆ ಸಂಭವಿಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಂವಾ ಗ್ರಾಮ ಸೇರಿದಂತೆ ಇತರೆ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು 1.5ಕೋಟಿ ವೆಚ್ಚದಲ್ಲಿ 16 ಮೀಟರ್ ಉದ್ದದ ಸೇತುವೆಯನ್ನು ನಿರ್ಮಿಸಲಾಗುತಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.

ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಇದು ಗಂಭೀರ ವಿಷಯವಾಗಿದ್ದು, ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಆರ್‌ಡಬ್ಲ್ಯೂಡಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದೀಪಕ್ ಕುಮಾರ್ ಸಿಂಗ್ ಹೇಳಿದ್ದಾರೆ.

”ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ವಿವರವಾದ ವರದಿಯನ್ನು ನಿರೀಕ್ಷಿಸಲಾಗಿದೆ,” ಘಟನೆಗೆ ನಿಖರ ಕಾರಣವನ್ನು ಪತ್ತೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಸೌರಭ್ ಜೋರ್ವಾಲ್ ಹೇಳಿದ್ದಾರೆ.

ಸೇತುವೆಯ ಕೆಲವು ಪಿಲ್ಲರ್‌ಗಳ ನಿರ್ಮಾಣಕ್ಕೆ ಸ್ಥಳೀಯರ ಒಂದು ಗುಂಪು ಆರಂಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ವರದಿಗಳಿವೆ. ಪೊಲೀಸರು ಈ ಬಗ್ಗೆಯೂ ಪರಿಶೀಲಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Latest Indian news

Popular Stories