ಮಡಿಕೇರಿಯಲ್ಲಿ ಮಾದಕ ವಸ್ತು ಮಾರಾಟ – ಮಂಗಳೂರಿನ 14 ಮಂದಿ ಸೇರಿದಂತೆ ಹಲವರ ಬಂಧನ

ಮಡಿಕೇರಿ, ಜು.17: ಕೊಡಗು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿ 1.702 ಕೆಜಿ ಗಾಂಜಾ ಮತ್ತು ಒಂಬತ್ತು ನಿಷೇಧಿತ ISD ಮಾದಕ ದ್ರವ್ಯವನ್ನು ಜಪ್ತಿ ಮಾಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ನಗರದ ಸಮೀಪದ ಮಕ್ಕಂದೂರು ಗ್ರಾಮದ ಹೋಂ ಸ್ಟೇ ಮೇಲೆ ದಾಳಿ ನಡೆಸಿ 414 ಗ್ರಾಂ ಗಾಂಜಾ ಹಾಗೂ ಒಂಬತ್ತು ನಿಷೇಧಿತ ಐಎಸ್‌ಡಿ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ.

ಬಂಧಿತರಲ್ಲಿ ರಿತಿಕ್ (23), ವಿಘ್ನೇಶ್ ಅಜಿತ್ ಅಂಚನ್ (21), ಸುಮನ್ ಹರ್ಷಿತ್ (26), ಚಿರಾಗ್ ಸನಿಲ್ (26), ಮಂಜುನಾಥ್ (30), ಲತೀಶ್ ನಾಯಕ್ (32), ಸಚಿನ್ (26), ರಾಹುಲ್ (26), ಪ್ರಜ್ವಲ್(32) ಅವಿನಾಶ್ (28), ಪ್ರತೀಕ್ ಕುಮಾರ್ (27), ಧನುಷ್ (28), ರಾಜೇಶ್ (45) ಮತ್ತು ದಿಲ್ ರಾಜು (30) ಸೇರಿದ್ದು ಎಲ್ಲರೂ ಮಂಗಳೂರಿನ ಮೂಲದವರು.

ಮಡಿಕೇರಿಯ ನಿವಾಸಿ ಹಾಗೂ ಹೋಂಸ್ಟೇ ಮಧ್ಯವರ್ತಿ ಬಿ ಗಣೇಶ್ (47) ಹಾಗೂ ಹೋಂ ಸ್ಟೇ ಮಾಲೀಕ ಸದಾಶಿವ ಬಿ ಹೆಚ್ (31) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಮತ್ತೊಂದು ದಾಳಿಯಲ್ಲಿ ಕನ್ನಂಡಬಾಣೆ ಜಂಕ್ಷನ್‌ನಲ್ಲಿ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಮೈಸೂರು ಮೂಲದ ಅಲಿಂ ಅಹಮದ್ ಮತ್ತು ಮೊಹ್ಸಿನ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 724 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಚನ್ನಯ್ಯನಕೋಟೆ ನಿವಾಸಿ ಇಮ್ರಾನ್ ಎಂಬಾತನನ್ನು ಬಂಧಿಸಲಾಗಿದ್ದು, ಆತನಿಂದ 190 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ.

ಗೋಣಿಕೊಪ್ಪದ ಕಾವೇರಿ ಕಾಲೇಜು ಬಳಿಯ ನಿವಾಸಿಗಳಾದ ಶಮೀರ್, ಜಬ್ಬಾರ್ ಮತ್ತು ನಿಸಾರ್ ಗಾಂಜಾ ಮಾರಾಟ ಮಾಡಲು ಸಾಗಿಸುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಮೂವರಿಂದ 370 ಗ್ರಾಂ ಜಪ್ತಿ ಮಾಡಲಾಗಿದೆ.

ಮಹಿಳಾ ಸಮಾಜದ ಬಳಿ ಗಾಂಜಾ ಸೇದುತ್ತಿದ್ದ ಮಡಿಕೇರಿಯ ನಿವಾಸಿಗಳಾದ ಸಾಗರ್, ರೆಹಮಾನ್ ಮತ್ತು ಚೇತನ್ ಕೆ. ಅವರನ್ನು ವಶಕ್ಕೆ ಪಡೆದಿದ್ದಾರೆ.

Latest Indian news

Popular Stories