ರಾಯ್‌ಪುರ: ಛತ್ತೀಸ್‌ಗಢದಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರು, ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಉಚಿತ ವಿದ್ಯುತ್, ಮಹಿಳೆಯರಿಗೆ ಮಾಸಿಕ ‘ಸಮ್ಮಾನ್ ರಾಶಿ’ ಮತ್ತು ನಿರುದ್ಯೋಗಿಗಳಿಗೆ ಮಾಸಿಕ 3,000 ರೂಪಾಯಿ ಸೇರಿದಂತೆ 10 ಗ್ಯಾರಂಟಿಗಳನ್ನು ಶನಿವಾರ ಘೋಷಿಸಿದ್ದಾರೆ.
ಇಂದು ರಾಯ್‌ಪುರದಲ್ಲಿ ಎಎಪಿ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು, ದೆಹಲಿ ಮತ್ತು ಪಂಜಾಬ್‌ನಲ್ಲಿ ತಮ್ಮ ಪಕ್ಷದ ಸರ್ಕಾರಗಳು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿವೆ. ಛತ್ತೀಸ್‌ಗಢದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನೀಡಿದ ಭರವಸೆಗಳನ್ನು ಈಡೇರಿಸಲಾಗುವುದು ಎಂದರು.
“ಇಂದು ನಾನು ನಿಮಗೆ 10 ಭರವಸೆಗಳನ್ನು ನೀಡುತ್ತಿದ್ದೇನೆ. ಇದು ನಕಲಿ ಪ್ರಣಾಳಿಕೆ ಅಥವಾ ‘ಸಂಕಲ್ಪ ಪತ್ರ’ದಂತಲ್ಲ. ನೀಡಿದ ಭರವಸೆಗಳನ್ನು ಈಡೇರಿಸುತ್ತೇವೆ” ಎಂದು ಕೇಜ್ರಿವಾಲ್ ಹೇಳಿದರು.
ಆಪ್ ಅಧಿಕಾರಕ್ಕೆ ಬಂದರೆ, 24 ಗಂಟೆಗಳ ನಿರಂತರ ವಿದ್ಯುತ್ ನೀಡುತ್ತೇವೆ, ಪ್ರತಿ ಮನೆಗೆ 300 ಯೂನಿಟ್‌ಗಳವರೆಗೆ ಉಚಿತ, ನವೆಂಬರ್ 2023 ರವರೆಗೆ ಬಾಕಿ ಉಳಿದಿರುವ ವಿದ್ಯುತ್ ಬಿಲ್‌ಗಳ ಮನ್ನಾ, 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೆ ಮಾಸಿಕ 1,000 ‘ಸಮ್ಮಾನ್ ರಾಶಿ'(ಗೌರವಧನ) ಮತ್ತು ಶಾಲಾ ಮಕ್ಕಳಿಗೆ ಉಚಿತ ಗುಣಮಟ್ಟದ ಶಿಕ್ಷಣ ನೀಡುತ್ತೇವೆ ಎಂದು ಕೇಜ್ರಿವಾಲ್ ಭರವಸೆ ನೀಡಿದ್ದಾರೆ.
ದೆಹಲಿಯಲ್ಲಿರುವಂತೆ, AAP ಸರ್ಕಾರವು ಛತ್ತೀಸ್‌ಗಢದ ಪ್ರತಿಯೊಬ್ಬ ನಾಗರಿಕರಿಗೆ ಉಚಿತ ಮತ್ತು ಉತ್ತಮ ಚಿಕಿತ್ಸೆ ಒದಗಿಸುತ್ತದೆ, ಪ್ರತಿ ಹಳ್ಳಿ ಮತ್ತು ನಗರಗಳಲ್ಲಿನ ವಾರ್ಡ್‌ಗಳಲ್ಲಿ ಮೊಹಲ್ಲಾ ಕ್ಲಿನಿಕ್‌ಗಳು, ಉದ್ಯೋಗ ನೀಡುತ್ತೇವೆ ಮತ್ತು ನಿರುದ್ಯೋಗಿಗಳಿಗೆ ತಿಂಗಳಿಗೆ 3,000 ರೂ ಭತ್ಯೆ, ಹಿರಿಯ ನಾಗರಿಕರಿಗೆ ಉಚಿತ ತೀರ್ಥಯಾತ್ರೆ, ಛತ್ತೀಸ್‌ಗಢವನ್ನು ಭ್ರಷ್ಟಾಚಾರ ಮುಕ್ತಗೊಳಿಸಿ, ಗುತ್ತಿಗೆ ನೌಕರರನ್ನು ಕಾಯಂಗೊಳಿಸುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ.