ಪ್ರೀತಿಗಾಗಿ ಅಕ್ರಮವಾಗಿ ಭಾರತ ಪ್ರವೇಶ: ಎಟಿಎಸ್ ನಿಂದ ಪಾಕ್ ಪ್ರಜೆ ಸೀಮಾ ಹೈದರ್, ಆಕೆಯ ಪ್ರಿಯಕರನ ತೀವ್ರ ವಿಚಾರಣೆ

ಲಕ್ನೋ: ತನ್ನ ಪ್ರಿಯಕರನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದ ಸೀಮಾ ಹೈದರ್  ಹಾಗೂ ಪ್ರಿಯಕರ ಸಚಿನ್ ಮೀನಾ ಹಾಗೂ ಅವರ ತಂದೆ ನೇತ್ರಪಾಲ್ ಸಿಂಗ್ ಅವರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ಪಡೆ ತನ್ನ ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆ ನಡೆಸಿದೆ.

ಪಾಕಿಸ್ತಾನದ ನಾಲ್ಕು ಮಕ್ಕಳ ತಾಯಿ ಸೀಮಾ ಹೈದರ್, ಪಬ್‌ಜಿ ಆನ್ಲೈನ್ ಗೇಮ್ ಆಡುವ ಮೂಲಕ ಭಾರತದ ಸಚಿನ್ ಮೀನಾ ಜತೆ ಪ್ರೇಮಾಂಕುರವಾಗಿತ್ತು. ಅದೇ ಕಾರಣಕ್ಕಾಗಿ ಆಕೆ, ಗಡಿಯನ್ನು ದಾಟಿ ಭಾರತಕ್ಕೆ ಬಂದಿದ್ದಳು. ಇದು ಭಾರೀ ಸುದ್ದಿಯಾಗಿತ್ತು.

ನಿನ್ನೆ ರಾತ್ರಿವರೆಗೂ ವಿಚಾರಣೆ ಮುಂದುವರಿದಿತ್ತು. ಸಚಿನ್ ಮತ್ತು ಆತನ ತಂದೆ ನೇತ್ರಪಾಲ್ ಸಿಂಗ್ ಅವರನ್ನೂ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಸಂಸ್ಥೆಗಳ ಪ್ರಮುಖ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸಿದ ಆರೋಪದ ಮೇಲೆ ಎಟಿಎಸ್, ಲಖನೌದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಶಂಕಿತ ಏಜೆಂಟ್ ಅನ್ನು ಬಂಧಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.

ತನ್ನ ನಾಲ್ಕು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಸೀಮಾ ಹೈದರ್‌ ಅವರನ್ನು 72 ಗಂಟೆಗಳ ಒಳಗೆ ದೇಶದಿಂದ ಹೊರಹಾಕದಿದ್ದರೆ ಗ್ರೇಟರ್ ನೋಯ್ಡಾದಲ್ಲಿ ಪ್ರತಿಭಟನೆ ನಡೆಸುವುದಾಗಿ ಬಲಪಂಥೀಯ ಗುಂಪು ಬೆದರಿಕೆ ಹಾಕಿತ್ತು.

ಸೀಮಾ, ಸಚಿನ್ ಮತ್ತು ನೇತ್ರಪಾಲ್ ಸಿಂಗ್ ಅವರನ್ನು ಸೋಮವಾರ ಎಟಿಎಸ್ ವಿಚಾರಣೆ ನಡೆಸಿದ್ದು, ಸ್ಥಳೀಯ ಪೊಲೀಸರು ಇದರಲ್ಲಿ ಭಾಗಿಯಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

‘ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ವಿಚಾರದಲ್ಲಿ ವಿಚಾರಣೆ ನಡೆಯುತ್ತಿದ್ದು, ವಿಚಾರಣೆಯ ನಂತರ ಅವರನ್ನು ಬಂಧಿಸಬಹುದು ಅಥವಾ ಬಂಧಿಸದಿರಬಹುದು’ಎಂದು ಯುಪಿ ಎಟಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಥಳೀಯ ಪೊಲೀಸರು ಪ್ರಕರಣವನ್ನು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದು, ಇನ್ನಷ್ಟೆ ಆರೋಪಪಟ್ಟಿ ಸಲ್ಲಿಸಬೇಕಾಗಿದೆ ಎಂದು ಅಧಿಕಾರಿ ಹೇಳಿದರು. ಪ್ರೀತಿಸಿದ ಯುವಕನ ಜೊತೆಗೆ ನೆಲೆಸುವ ಉದ್ದೇಶದಿಂದ ಸೀಮಾ ಹೈದರ್‌ ಪಾಕಿಸ್ತಾನ ತೊರೆದು ಭಾರತ ಪ್ರವೇಶಿಸಿದ್ದು, ಈ ಘಟನೆಯಲ್ಲಿ ‘ಪ್ರೀತಿ’ಯನ್ನು ಮೀರಿದ್ದೇನೂ ಇಲ್ಲ ಎಂದು ಪಾಕ್‌ ಗುಪ್ತಚರ ಇಲಾಖೆ ಅಲ್ಲಿನ ಸರ್ಕಾರಕ್ಕೆ ವರದಿ ನೀಡಿತ್ತು.

ಹೈದರ್ ಅವರ ನೆರೆಹೊರೆಯವರು ಮತ್ತು ಸಂಬಂಧಿಕರು ಭಾನುವಾರ ಆಕೆ ಮತ್ತೆ ಪಾಕಿಸ್ತಾನಕ್ಕೆ ಮರಳುವುದನ್ನು ವಿರೋಧಿಸಿದ್ದಾರೆ. ಆಕೆ ಮಕ್ಕಳನ್ನು ಮಾತ್ರ ಪಾಕಿಸ್ತಾನಕ್ಕೆ ಕಳುಹಿಸಲಿ. ಈಗ ಅವಳು ಮುಸ್ಲಿಮ್ ಕೂಡ ಅಲ್ಲ ಎಂದು ಸೀಮಾ ಹೈದರ್ ವಾಸಿಸುತ್ತಿದ್ದ ಬಾಡಿಗೆ ಮನೆಯ ಮಾಲೀಕ 16 ವರ್ಷದ ಹುಡುಗ ಹೇಳಿದ್ದಾರೆ. ಹೈದರ್ ಅವರ ಚಿಕ್ಕಪ್ಪ ಪಾಕಿಸ್ತಾನದ ಸೇನೆಯಲ್ಲಿ ಸುಬೇದಾರ್ ಆಗಿದ್ದಾರೆ. ಅಲ್ಲದೇ ಆಕೆಯ ಸಹೋದರ ಕೂಡ ಪಾಕಿಸ್ತಾನಿ ಸೈನಿಕರಾಗಿದ್ದಾರೆ.

Latest Indian news

Popular Stories