ಮಂಗಳೂರು: ಕರಾವಳಿಯಲ್ಲಿ ಮತ್ತೆ ಗೋಹತ್ಯೆ ವಿರುದ್ಧ ಹೋರಾಟಕ್ಕೆ ಹಿಂದೂ ಸಂಘಟನೆಗಳು ಸಜ್ಜಾಗಿವೆ. ಬಕ್ರೀದ್ ಸಂದರ್ಭದಲ್ಲಿ ಈ ಬಾರಿ ಅಕ್ರಮ ಗೋಹತ್ಯೆಗೆ ಅವಕಾಶ ನೀಡುವುದಿಲ್ಲ ಎಂದು ಬಜರಂಗದಳ ನಾಯಕರು ಎಚ್ಚರಿಕೆ ನೀಡಿದ್ದಾರೆ.
ಮುಸ್ಲಿಮರು ತಮ್ಮ ಪವಿತ್ರ ಹಬ್ಬ ಬಕ್ರೀದ್ ಆಚರಣೆ ಸಂದರ್ಭದಲ್ಲಿ ಪ್ರಾಣಿಗಳನ್ನು ಬಲಿ ಕೊಡುವುದು ಸಂಪ್ರದಾಯ. ಕೆಲವು ಕಡೆ ಇದಕ್ಕೆ ಕುರಿ- ಆಡುಗಳನ್ನು ಬಳಸಿದರೆ, ಇನ್ನೂ ಕೆಲವು ಕಡೆ ಕೋಣ, ದನಗಳನ್ನು ಬಳಸುತ್ತಾರೆ. ಆದರೆ ದನಗಳನ್ನು ಬಲಿ ನೀಡಲು ಹಿಂದೂ ಸಂಘಟನೆಗಳ ಕಡೆಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಬಜರಂಗದಳ ನಾಯಕರು, ಈ ಬಾರಿ ಗೋವುಗಳ ಹತ್ಯೆಗೆ ಅವಕಾಶ ನೀಡುವುದಿಲ್ಲ ಎಂದು ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಅಕ್ರಮ ಗೋಸಾಗಣೆ, ಹತ್ಯೆ ನಡೆಸಿದ್ದಲ್ಲಿ ಯಾವುದೇ ಬೆಲೆ ತೆತ್ತಾದರೂ ನಿಲ್ಲಿಸುತ್ತೇವೆ ಎಂದು ಬಜರಂಗಳದ ದ.ಕ ಜಿಲ್ಲಾ ಸಂಯೋಜಕ ಪುನೀತ್ ಅತ್ತಾವರ ಹೇಳಿದ್ದಾರೆ.
ಪ್ರಾಣಿಗಳನ್ನು ಬಲಿ ಕೊಡಲೇಬೇಕು ಎಂದಿದ್ದರೆ, ಆಡು, ಕುರಿಗಳನ್ನು ಬಳಸಿ. ಹಿಂದೂಗಳ ಪೂಜನೀಯ ಸ್ಥಾನದಲ್ಲಿರುವ ಗೋವುಗಳನ್ನು ಬಲಿ ಕೊಡಬೇಡಿ ಎಂದು ಬಜರಂಗದಳ ನಾಯಕರು ಹೇಳಿದ್ದಾರೆ. ಆದರೆ ಆಹಾರ ನಮ್ಮ ಹಕ್ಕು ಎನ್ನುವುದು ಮುಸ್ಲಿಮರ ಪ್ರತಿಪಾದನೆ. ಇದಲ್ಲದೆ ಈ ಬಾರಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿದ್ದು, ಈಗಾಗಲೇ ಕಾಂಗ್ರೆಸ್ ನಾಯಕರು ಹಿಂದೂ ಸಂಘಟನೆಗಳು ಅತಿರೇಕಕ್ಕೆ ಹೋದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ತೀವಿ ಎಂದಿದ್ದಾರೆ. ಇದೇ ವೇಳೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯೂ ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಬೇಡಿ. ಗೋವುಗಳನ್ನು ಕಡಿಯುವುದಕ್ಕೆ ಅವಕಾಶ ಕೊಡಬೇಡಿ ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.