ಅನುಮತಿಯಿಲ್ಲದೇ ಬೋಟಿಂಗ್ : ಪೊಲೀಸ್ ಇಲಾಖೆಗೆ ಅಕ್ರಮ ಬೋಟಿಂಗ್ ಮಾಹಿತಿ ನೀಡಿದ ಪ್ರವಾಸೋದ್ಯಮ ಇಲಾಖೆ :ತಕ್ಷಣದಿಂದ ಸಮುದ್ರದ ಬೋಟಿಂಗ್’ಗೆ ನಿಷೇಧ

ಕಾರವಾರ: ತದಡಿ ಮೂಡಂಗಿ ಬಳಿ ಪರವಾನಿಗೆ ಇಲ್ಲದೇ ಪ್ರವಾಸಿ ಬೋಟ್ ನಡೆಸುತ್ತಿದ್ದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಗೋಕರ್ಣ ಪೊಲೀಸ್ ಇಲಾಖೆಗೆ ಪತ್ರ ಬರೆದು ಮಾಹಿತಿ ನೀಡಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜಯಂತ ತಿಳಿಸಿದ್ದಾರೆ.


ಇಂದು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಅವರು ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆದು ಬೋಟಿಂಗ್ ಮಾಡುವಂತೆ , ಖಾಸಗಿ ಬೋಟ್ ಹೊಂದಿದವರಿಗೆ ಸೂಚಿಸಿದರು‌ .


ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿ ಸಮೀಪ ಮಿತಿಗಿಂತ ಹೆಚ್ಚಿನ ಜನರನ್ನು ದೋಣಿಯಲ್ಲಿರಿಸಿ ಕರೆದೊಯ್ದ ಕಾರಣ ದೋಣಿ ಮುಗುಚಿ ಪ್ರವಾಸಿಗರು ನೀರು ಪಾಲಾದ ಘಟನೆಯು ನಡೆದಿದ್ದು ಅದೃಷ್ಟಾವಶಾತ್ ದೋಣಿಯಲ್ಲಿದ್ದ ಪ್ರವಾಸಿಗರು ಲೈಫ್‌ ಜಾಕೆಟ್‌ನಿಂದಾಗಿ ಪ್ರಾಣಾಪಯದಿಂದಾಗಿ ಪಾರಾಗಿದ್ದಾರೆ ಎಂದು ಅವರು ಮಾಧ್ಯಮಗಳಿಗೆ ಸೋಮವಾರ ಮಾಹಿತಿ ನೀಡಿದರು‌ .


ದುರಂತಕ್ಕೊಳಗಾದ ಪ್ರವಾಸಿ ಬೋಟ್‌ನ ಮಾಲೀಕರು ಪ್ರವಾಸೋದ್ಯಮ ಇಲಾಖೆಯಿಂದ ಬೋಟಿಂಗ್‌ ಚಟುವಟಿಕೆ ನಡೆಸುವ ಬಗ್ಗೆ ಯಾವುದೇ ರೀತಿಯ ಅನುಮತಿಯನ್ನು ಪಡೆದಿರುವುದಿಲ್ಲ ಹಾಗೂ ಅನಧಿಕೃತವಾಗಿ ಬೋಟ್ ಉದ್ಯಮ ನಡೆಸಿದ್ದು ಕಂಡುಬಂದಿದೆ ಎಂದರು.


ತದಡಿ, ಗೋಕರ್ಣ ವ್ಯಾಪ್ತಿಯಲ್ಲಿ ಹಲವರು ಅನಧಿಕೃತವಾಗಿ ಬೋಟಿಂಗ್ ನಡೆಯುತ್ತಿರುವುದರ ಬಗ್ಗೆ ಮಾಹಿತಿ ಕಂಡು ಬಂದಿದೆ .ಎಲ್ಲಾ ಬೋಟ್‌ ಮಾಲೀಕರಿಗೆ ಅನಧಿಕೃತ ಬೋಟಿಂಗ್‌ ನಡೆಸಿದ್ದಲ್ಲಿ ಕಾನೂನು ಕಠಿಣ ಕ್ರಮ ಕೈಗೊಳ್ಳಲಾಗುವುದರ ಬಗ್ಗೆ ಈಗಾಗಲೆ ಎಚ್ಚರಿಕೆಯನ್ನು ನೀಡಲಾಗಿದೆ ಎಂದರು.

ಈ ಹಿಂದೆ ಪ್ರವಾಸೋದ್ಯಮ ಇಲಾಖೆಯಿಂದ ಕುಮಟಾ ಮತ್ತು ಗೋಕರ್ಣ ವ್ಯಾಪ್ತಿಯಲ್ಲಿ ಅನುಮತಿ ಪಡೆದ ಪ್ರವಾಸಿ ಬೋಟಗಳ ಮಾಲೀಕರು ಅರ್ಜಿಯೊಂದಿಗೆ ಸಲ್ಲಿಸಿರುವ ದಾಖಲೆಗಳಲ್ಲಿ , ಕೆಲವರ ದಾಖಲೆಗಳ ಕಾಲಾವಧಿಯು ಮುಕ್ತಾಯಗೊಂಡಿದೆ. ಕಾರಣ ಪರವಾನಿಗೆ ಅವಧಿ ಮುಗಿದವರ ಅನುಮತಿ ಪತ್ರವನ್ನು ರದ್ದುಪಡಿಸಲಾಗಿದೆ.

ಮುಂದಿನ ದಿನಗಳಲ್ಲಿ ಪ್ರವಾಸಿ ಬೋಟಿಂಗ್‌ ಚಟುವಟಿಕೆಯನ್ನು ಕ್ರಮಬದ್ದವಾಗಿ ಹಾಗೂ ನಿಗಧಿತ ವ್ಯವಸ್ಥೆಯಲ್ಲಿ ನಡೆಸಲು ಕುಮಟಾ ಗೋಕರ್ಣ ವ್ಯಾಪ್ತಿಯಲ್ಲಿ ಬರುವ ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆದವರ (ಟೆಂಡರದಾರರನ್ನು ಹೊರತುಪಡಿಸಿ) ಮಾಹಿತಿಯನ್ನು ಕರಾವಳಿ ಕಾವಲು ಪಡೆ ಹಾಗೂ ಪೋಲಿಸ್‌ ಇಲಾಖೆ ಗೋಕರ್ಣದವರಿಗೆ ನೀಡಲಾಗಿದ್ದು ಹಾಗೂ ಅನಧಿಕೃತವಾಗಿ ನಡೆಸುತ್ತಿರುವ ಎಲ್ಲಾ ಪ್ರವಾಸಿ ಬೋಟ್‌ಗಳ ಚಟುವಟಿಕೆಯನ್ನು ತಕ್ಷಣವೆ ಸ್ಥಗಿತಗೊಳಿಸಲು ಪತ್ರವನ್ನು ಬರೆಯಲಾಗಿದೆ ಎಂದಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಹಲವಾರು ಪ್ರವಾಸಿ ಬೋಟಿಂಗ್‌ ಮಾಲೀಕರು ಅನಧಿಕೃತವಾಗಿ ಬೋಟಿಂಗ್‌ ನಡೆಸುತ್ತಿರುವುದು ಕಂಡು ಬಂದಿದ್ದು ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಸದ್ಯಕ್ಕೆ ಜಿಲ್ಲೆಯಾದ್ಯಂತ ಎಲ್ಲಾ ಪ್ರವಾಸಿ ಬೋಟಿಂಗ್‌ ಚಟುವಟಿಕೆಯನ್ನು (ಟೆಂಡರ್ದಾರರನ್ನು ಹೊರತುಪಡಿಸಿ) ಸ್ಥಗಿತಗೊಳಿಸಲಾಗಿದೆ‌ . ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆಯಲು ಅಗತ್ಯವಿರುವ ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಿ ಅನುಮತಿ ಪಡೆಯಬಹುದು ಬೋಟಿಂಗ್ ನಡೆಸುವಂತೆ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ಸೂಚಿಸಿದ್ದಾರೆ.
…….

Latest Indian news

Popular Stories