
ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪ್ಯಾಲೆಸ್ಟೈನ್ ಪರ ಕಾರ್ಯಕ್ರಮ ಮುಂದೂಡಿದೇಕೆ? | ಕಾರ್ಯಕ್ರಮದ ಸಭಾಂಗಣಕ್ಕೆ ಬೀಗ ಹಾಕಿದ್ದು ಯಾರು?
ಬೆಂಗಳೂರಿನ ಕ್ವೀನ್ಸ್ ರೋಡಿನಲ್ಲಿರುವ ಬಿಫ್ಟ್ ಸಭಾಂಗಣದಲ್ಲಿ ಸಾಲಿಡಾರಿಟಿ ಯೂತ್’ಮೂವ್ಮೆಂಟ್, ಕರ್ನಾಟಕ ವತಿಯಿಂದ ಪ್ಯಾಲೆಸ್ಟೈನ್ ಪರ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮ ನಿಗದಿ ಪಡಿಸಿದಂತೆ ಅಕ್ಟೋಬರ್ 31 ರ ಸಂಜೆ 6.30 ಕ್ಕೆ ನಡೆಯಬೇಕಿತ್ತು. ಆದರೆ ಸದ್ಯದ ಮಾಹಿತಿಯ ಪ್ರಕಾರ ಹೈಗ್ರೌಂಡ್ಸ್ ಠಾಣಾ ಪೊಲೀಸರು ಮಂಗಳವಾರ ಬೆಳಗ್ಗೆ 11ರ ಸುಮಾರಿಗೆ ಬಂದು ಸಭಾಂಗಣಕ್ಕೆ ಬೀಗ ಜಡಿದು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಚಿಂತಕ, ಹಿರಿಯ ವಾಗ್ಮಿ ಶಿವಸುಂದರ್, ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಳಗಾಮಿ, ಹಿರಿಯ ನ್ಯಾಯವಾದಿ ಹಾಗೂ ಮಾನವ ಹಕ್ಕು ಹೋರಾಟಗಾರ ಬಿ.ಟಿ ವೆಂಕಟೇಶ್ ಹಾಗೂ ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಸಂಘಟನೆಯ ರಾಜ್ಯಾಧ್ಯಕ್ಷ ಲಬೀದ್ ಶಾಫಿ ಭಾಗವಹಿಸಿ, ಮಾತನಾಡುವವರಿದ್ದರು.
ಈ ಕುರಿತು ಕಾರ್ಯಕ್ರಮದ ಆಯೋಜಕರಲ್ಲಿ ದಿ ಹಿಂದುಸ್ತಾನ್ ಗಝೆಟ್ ಪ್ರತಿನಿಧಿ ಮಾತನಾಡಿದಾಗ, ” ಪೊಲೀಸ್ ಕಮಿಷನರ್ ಕಚೇರಿಗೆ ಈ ಸಂಬಂಧ ನಮ್ಮನ್ನು ಕರೆಯಲಾಗಿತ್ತು. ಅವರು ರಾಜ್ಯೋತ್ಸವ ಇರುವ ಕಾರಣ ಕಾರ್ಯಕ್ರಮ ಗುರುವಾರ ಮಾಡಲು ಹೇಳಿದ್ದಾರೆ. ಧ್ವನಿ ವರ್ಧಕ ಅನುಮತಿ ಪಡೆದುಕೊಳ್ಳಿ” ಎಂದು ಹೇಳಿದ್ದಾರೆಂದು ತಿಳಿಸಿದರು.
“ಒಳಾಂಗಣ ಕಾರ್ಯಕ್ರಮಕ್ಕೂ ಅನುಮತಿ ಪಡೆಯಬೇಕಾದ ಸುತ್ತೋಲೆ ತೋರಿಸಿದರು. ನಮಗೆ ಅರ್ಜಿಯೊಂದನ್ನು ಕೊಟ್ಟು ಧ್ವನಿ ವರ್ಧಕ ಅನುಮತಿ ಪಡೆಯಲು ಹೇಳಿರುವ ಕುರಿತು ತಿಳಿಸಿದ್ದಾರೆ” ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಶಿವಸುಂದರ್ ಪ್ರತಿಕ್ರಿಯಿಸಿ, “ಒಂದು ಕಡೆ ಸೋನಿಯಾ ಗಾಂಧಿ ಪ್ಯಾಲೆಸ್ತಿನ್ ವಿಷಯದಲ್ಲಿ ನ್ಯಾಯ ಹಾಗೂ ಶಾಂತಿ ಆಗ್ರಹಿಸಿ ಬಲಿಷ್ಠ ಹಾಗೂ ಗಟ್ಟಿಯಾದ ಧ್ವನಿಗಳು ಮೊಳಗಬೇಕು ಎಂದು ಹೇಳುತ್ತಾರೆ./ಆದರೆ ಕರ್ನಾಟಕದಲ್ಲಿ ಗಟ್ಟಿ ಧ್ವನಿ ಇರಲಿ ಪಿಸುಮಾತು ಆಡಲೂ ಪೊಲೀಸರು ಅವಕಾಶ ಕೊಡುತ್ತಿಲ್ಲ. ಬೀದಿ ಪ್ರದರ್ಶನವಿರಲಿ, ಸಂಘಟನೆಗಳು ತಮ್ಮ ಕಚೇರಿಯೊಳಗೆ ಸದಸ್ಯರ ಜೊತೆಯೂ ಪ್ಯಾಲೇಸ್ತಿನ್ ವಿಷಯ ಚರ್ಚೆ ಮಾಡದಂತೆ ನಿರ್ಬಂಧ ಹೇರಿದ್ದಾರೆ.. Emeregency ನೆನಪಿಗೆ ತರಿಸುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಭಾರತದ ನಿಲುವು ಪ್ಯಾಲೆಸ್ಟೈನ್ ಸ್ವತಂತ್ರ ದೇಶದ ಪರ ಇದ್ದರೂ ಅದನ್ನು ಬೆಂಬಲಿಸಿ ನಡೆಯುವ ಪ್ರತಿಭಟನೆಯನ್ನು ಯಾಕೆ ನಿರ್ಬಂಧಿಸಲಾಗುತ್ತಿದೆ ಎಂಬ ಪ್ರಶ್ನೆ ಇದೀಗ ಸಾರ್ವಜನಿಕರು ಕೇಳುತ್ತಿದ್ದಾರೆ.




