ಬೆಂಗಳೂರಿನಲ್ಲಿ ದಾಖಲಾದ ಗರಿಷ್ಠ ತಾಪಮಾನ ಎಷ್ಟು ಗೊತ್ತಾ?

ಬೆಂಗಳೂರು: ಕರ್ನಾಟಕದಲ್ಲಿ ಬೇಸಿಗೆ ಧಗೆ ದಿನೇ ದಿನೇ ಹೆಚ್ಚಾಗುತ್ತಿದ್ದು, ನಿನ್ನೆ ದಾಖಲೆಯ ತಾಪಮಾನ ದಾಖಲಾಗಿದ್ದ ಬೆಂಗಳೂರಿನಲ್ಲಿ ಇಂದಿನ ತಾಪಮಾನ ಆ ದಾಖಲೆಯನ್ನೂ ಮೀರಿಸಿದೆ.

ಕಳೆದ 5 ವರ್ಷಗಳಲ್ಲಿ ಬೆಂಗಳೂರು ನಗರವು ಅತ್ಯಂತ ಬಿಸಿ ದಿನವನ್ನು (warmest March day) ನಿನ್ನೆ ಅಂದರೆ ಮಾರ್ಚ್ 29ರನ್ನು ಕಂಡಿತ್ತು. ಆದರೆ ಇಂದು ಅದನ್ನೂ ಮೀರಿಸಿದ ತಾಪಮಾನ ದಾಖಲಾಗಿದೆ.

ನಿನ್ನೆ 36.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿ, ದಾಖಲೆ ಬರೆದಿತ್ತು. ಆದರೆ ಇಂದು 36.6 ಡಿಗ್ರಿ ತಾಪಮಾನ ದಾಖಲಾಗಿ ಈ ದಾಖಲೆಯನ್ನು ಮೀರಿಸಿದೆ. ಆ ಮೂಲಕ ಬೆಂಗಳೂರು ನಗರವು ಅತ್ಯಂತ ಬಿಸಿ ದಿನ ಕಂಡಿದೆ. ಇದು ಕಳೆದ 5 ವರ್ಷಗಳಲ್ಲಿ ಗರಿಷ್ಠ ಎಂದು ಹವಾಮಾನ ಇಲಾಖೆ ಹೇಳಿದೆ.

ಮಾರ್ಚ್ ಕೊನೆಯ ವಾರದಲ್ಲಿ ಸಾಮಾನ್ಯ ಸರಾಸರಿ ನಿರೀಕ್ಷಿತ ತಾಪಮಾನವು 34.2 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಈ ಹಿಂದೆ 1996 ರಲ್ಲಿ ಮಾರ್ಚ್ ತಿಂಗಳಿನಲ್ಲಿ ಬೆಂಗಳೂರು ಅತ್ಯಧಿಕ ಗರಿಷ್ಠ ತಾಪಮಾನ 37.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.

ಬೆಂಗಳೂರಿನಲ್ಲಿ ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಮಾರ್ಚ್ ಕೊನೆಯ ವಾರದಲ್ಲಿ ನಿರೀಕ್ಷೆಯಂತೆ ಬೆಂಗಳೂರಿನಲ್ಲಿ ಅಲ್ಪ ಪ್ರಮಾಣದಲ್ಲಿಯೂ ಕೂಡ ಮಳೆಯಾಗಲಿಲ್ಲ. ಇದಕ್ಕೆ ಕಾರಣ ಗಾಳಿ ವಿರುದ್ಧ ದಿಕ್ಕಿನಲ್ಲಿ ಬೀಸುತ್ತಿರುವುದು. ತಮಿಳುನಾಡು ಮತ್ತು ಮಹಾರಾಷ್ಟ್ರದ ನಡುವೆ ಗಾಳಿ ಸ್ಥಗಿತಗೊಂಡಿದೆ ಎಂದು ಐಎಂಡಿಯ ಹಿರಿಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಐದು ದಿನಗಳಲ್ಲಿ ಕರ್ನಾಟಕದ ಉತ್ತರ ಮತ್ತು ದಕ್ಷಿಣ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಗರಿಷ್ಠ ತಾಪಮಾನವು ಎರಡರಿಂದ ಮೂರು ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಐಎಂಡಿ ಬುಧವಾರ ತಿಳಿಸಿದೆ. ಇದರ ಜೊತೆಗೆ ಏಪ್ರಿಲ್ ಎರಡನೇ ವಾರದಿಂದ ಬೆಂಗಳೂರಿನಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಕೂಡ ಸಂಸ್ಥೆ ನೀಡಿದೆ. ಬೆಂಗಳೂರು ಏಪ್ರಿಲ್‌ನಲ್ಲಿ ವಾಡಿಕೆಗಿಂತ ಸ್ವಲ್ಪ ಹೆಚ್ಚು ಮಳೆಯಾಗಬಹುದು ಎಂದು ಹೇಳಿದೆ.

Latest Indian news

Popular Stories