ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಲೋಕಸಭೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಮಸೂದೆ 2023 ಅನ್ನು ಮಂಡಿಸಿದ್ದು, ಸುಳ್ಳು ಸುದ್ದಿ ಹರಡುವವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ.
ಪ್ರಸ್ತಾವಿತ ಮಸೂದೆಯನ್ನು ಪರಿಶೀಲನೆಗಾಗಿ ಸ್ಥಾಯಿ ಸಮಿತಿಗೆ ಕಳುಹಿಸಲಾಗಿದೆ. ಭಾರತದ ಸಾರ್ವಭೌಮತ್ವ ಮತ್ತು ಭದ್ರತೆಗೆ ಧಕ್ಕೆ ತರುವಂತಹ ‘ನಕಲಿ ಸುದ್ದಿ ಅಥವಾ ತಪ್ಪು ಮಾಹಿತಿಗಳನ್ನು’ ಹರಡುವವರಿಗೆ ಸೆಕ್ಷನ್ 195 ರ ಅಡಿಯಲ್ಲಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ನೀಡಲಾಗಿದೆ.
ಸೆಕ್ಷನ್ 195(1) ಡಿ ಪ್ರಕಾರ, “ಭಾರತದ ಸಾರ್ವಭೌಮತೆ ಏಕತೆ ಮತ್ತು ಸಮಗ್ರತೆ ಅಥವಾ ಭದ್ರತೆಗೆ ಧಕ್ಕೆ ತರುವಂತಹ ಸುಳ್ಳು ಅಥವಾ ತಪ್ಪುದಾರಿಗೆಳೆಯುವ ಮಾಹಿತಿಯನ್ನು ಸಿದ್ಧಪಡಿಸಿದರೆ ಅಥವಾ ಪ್ರಕಟಿಸಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ” ಎಂದು ಪ್ರಸ್ತಾವಿತ ಕಾನೂನು ಹೇಳುತ್ತದೆ.
ಹೊಸ ಮಸೂದೆಯು ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳು, ಕೊಲೆಗಳು ಮತ್ತು ದೇಶವಿರೋಧಿ ಅಪರಾಧಗಳ ಕಾನೂನುಗಳಿಗೆ ಆದ್ಯತೆ ನೀಡುತ್ತದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಿನ್ನೆ ಲೋಕಸಭೆಯಲ್ಲಿ ಮೂರು ಮಸೂದೆಗಳನ್ನು ಮಂಡಿಸಿದ್ದು, ಇದು ನ್ಯಾಯವನ್ನು ನೀಡುವ ಮತ್ತು ಸಂವಿಧಾನದ ಪ್ರಕಾರ ಭಾರತೀಯ ನಾಗರಿಕರಿಗೆ ನೀಡಿದ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.