ಬೀದರ್‌ | ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌‌: ಟೂರ್ನಿ ಪೋಸ್ಟರ್‌ ಬಿಡುಗಡೆ

ಬೀದರ್‌: ಡಿ. 17ರಂದು ನಗರದ ನೆಹರೂ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಮೆಂಟ್‌ ಪೋಸ್ಟರ್‌ ಅನ್ನು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು.

ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ. ಅವರು ಪೋಸ್ಟರ್‌ ಬಿಡುಗಡೆಗೊಳಿಸಿದರು.

ಗೋವಿಂದ ರೆಡ್ಡಿ ಮಾತನಾಡಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ, ಬ್ರಿಮ್ಸ್ ವೈದ್ಯಾಧಿಕಾರಿಗಳ ತಂಡ, ಪಶು ವೈದ್ಯಾಧಿಕಾರಿಗಳ ತಂಡ ಹಾಗೂ ಪತ್ರಕರ್ತರ ಕ್ರಿಕೆಟ್ ಕ್ಲಬ್‌ ತಂಡಗಳ ನಡುವೆ ಟೆನಿಸ್‌ ಬಾಲ್‌ ಪಂದ್ಯಾವಳಿ ನಡೆಯಲಿದೆ. ಇದೊಂದು ಸೌಹಾರ್ದ ಟೂರ್ನಮೆಂಟ್‌. ಆದರೆ, ವೃತ್ತಿಪರ ಕ್ರಿಕೆಟ್‌ ಟೂರ್ನಮೆಂಟ್‌ನಂತೆ ಶಿಸ್ತುಬದ್ಧವಾಗಿ ಪತ್ರಕರ್ತರ ಕ್ರಿಕೆಟ್‌ ಕ್ಲಬ್‌ನವರು ವಿವಿಧ ಇಲಾಖೆಗಳ ಸಹಕಾರದಲ್ಲಿ ಆಯೋಜಿಸಿದ್ದಾರೆ ಎಂದು ಹೇಳಿದರು.

ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ಮಾತನಾಡಿ, ಟೂರ್ನಮೆಂಟ್‌ ಅಂಗವಾಗಿ ಕ್ರೀಡಾಂಗಣದಲ್ಲಿ ಆಟಗಾರರು ಗಾಯಗೊಂಡರೆ ಅವರಿಗೆ ಮೊದಲ ಚಿಕಿತ್ಸಾ ಸೌಕರ್ಯ, ವೈದ್ಯಕೀಯ ನೆರವು, ಆಂಬುಲೆನ್ಸ್‌ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರು ಕೂಡ ಬಂದು ಪಂದ್ಯಗಳನ್ನು ವೀಕ್ಷಿಸಬಹುದು. ಜನರ ಅನುಕೂಲಕ್ಕಾಗಿ ಪಾರ್ಕಿಂಗ್‌ ಸ್ಥಳದಲ್ಲಿ ಉಪಾಹಾರ, ಊಟ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು. ಜನ ಹಣ ಕೊಟ್ಟು ಖರೀದಿಸಬಹುದು ಎಂದು ತಿಳಿಸಿದರು.

ಪತ್ರಕರ್ತರ ಕ್ರಿಕೆಟ್‌ ಕ್ಲಬ್ ವ್ಯವಸ್ಥಾಪಕ ಅಪ್ಪಾರಾವ ಸೌದಿ ಮಾತನಾಡಿ, ಇಡೀ ಪಂದ್ಯಾವಳಿಯನ್ನು ಕ್ಲಬ್‌ನಿಂದ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತ, ಜಿಪಂ, ಪೊಲೀಸ್‌ ಇಲಾಖೆಯ ಸಹಯೋಗ ಇದೆ. ಟೂರ್ನಮೆಂಟ್‌ ಆಯೋಜಿಸಲು ಕ್ಲಬ್‌ ಸದಸ್ಯರು ವೈಯಕ್ತಿಕವಾಗಿ ಹಣ ಭರಿಸಿದ್ದಾರೆ. ಇಡೀ ಪಂದ್ಯಾವಳಿ ವೃತ್ತಿಪರ ಕ್ರಿಕೆಟ್‌ಗಳಂತೆ ನಡೆಯಲಿದೆ. ಪ್ರತಿ ಪಂದ್ಯಕ್ಕೂ ಪಂದ್ಯ ಶ್ರೇಷ್ಠ ಬಹುಮಾನ ನೀಡಲಾಗುವುದು ಎಂದರು. ಡಿ. 17ರಂದು ಬೆಳಿಗ್ಗೆ 7ಗಂಟೆಯಿಂದಲೇ ಪಂದ್ಯಗಳು ಶುರುವಾಗಲಿವೆ.

10 ಓವರ್‌ಗಳ ಪಂದ್ಯಗಳು ಇರಲಿವೆ. ಒಟ್ಟು ಆರು ತಂಡಗಳು ಟೂರ್ನಮೆಂಟ್‌ನಲ್ಲಿ ಭಾಗವಹಿಸುತ್ತಿವೆ ಎಂದು ತಿಳಿಸಿದರು. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗೌತಮ ಅರಳಿ, ಪತ್ರಕರ್ತರ ಕ್ರಿಕೆಟ್‌ ಕ್ಲಬ್‌ ತಂಡದ ನಾಯಕ ರಾಜಕುಮಾರ, ಉಪನಾಯಕ ಪೃಥ್ವಿರಾಜ, ಸಹ ಆಟಗಾರರು ಲೋಕೇಶ್‌ ಮರಕಲ್‌, ಬಸಯ್ಯ ಸ್ವಾಮಿ, ಲಿಂಗರಾಜ, ಆನಂದ ದೇವಪ್ಪ, ಸಾಗರ್‌, ಸುನೀಲ ಕುಲಕರ್ಣಿ, ಶಶಿಕಾಂತ ಬಂಬುಳಗಿ, ಶಶಿಕಾಂತ ಎಸ್‌. ಶೆಂಬೆಳ್ಳಿ, ಬಾಬುವಾಲಿ, ಡಿ.ಕೆ. ಗಣಪತಿ ಇತರರಿದ್ದರು.

Latest Indian news

Popular Stories